ಶಿವಾಜಿ ಪ್ರತಿಮೆಗೆ 3,600 ಕೋಟಿ ರೂ. ಎಲ್ಲಿಂದ ಬರುತ್ತದೆ ?
ರಾಜ್ ಠಾಕ್ರೆ ಪ್ರಶ್ನೆ

ನಾಶಿಕ್,ಡಿ.27: ಅರಬ್ಬೀ ಮಹಾಸಾಗರದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಶಿವಾಜಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ಕೆಲವೇ ದಿನಗಳಾಗಿವೆ. ಅಷ್ಟರಲ್ಲಿಯೇ ಈ ಯೋಜನೆಯ ಬಗ್ಗೆ ಅಪಸ್ವರಗಳು ಕೇಳಲಾರಂಭಿಸಿವೆ. ಈ ಯೋಜನೆಯ ವೆಚ್ಚವಾದ ರೂ 3,600 ಕೋಟಿ ರೂಪಾಯಿ ಎಲ್ಲಿಂದ ಬರುತ್ತದೆ ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
‘‘ಮುಂಬೈ ತೀರದಲ್ಲಿ ಸಾಗರದ ಮಧ್ಯೆ ವೀರ ಮರಾಠಾ ಚಕ್ರವರ್ತಿ ಶಿವಾಜಿಯ ದೊಡ್ಡ ಪ್ರತಿಮೆ ನಿರ್ಮಾಣವೂ ಒಳಗೊಂಡಿರುವ ಈ ಬೃಹತ್ ಯೋಜನೆಗೆ ರೂ 3.600 ಕೋಟಿ ತಗಲುವುದು ಎಂದು ರಾಜ್ಯ ಸರಕಾರ ಹೇಳಿದೆ. ಅವರಲ್ಲಿ ಅಷ್ಟು ಹಣವಿದೆಯೇ ? ಹಿಂದೆ ಕೂಡ ಇಂತಹುದೇ ಹಲವು ಘೋಷಣೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಡಿದ್ದರೂ, ಹಣಬಂದಿರಲಿಲ್ಲ,’’ ಎಂದು ಠಾಕ್ರೆ ಹೇಳಿದರು.
ಇಂತಹ ಯೋಜನೆಗೆ ಹಣ ಸುರಿಯುವ ಬದಲು ಮಹಾರಾಷ್ಟ್ರದಲ್ಲಿ ಶಿವಾಜಿಆಡಳಿತದ ಸಮಯ ನಿರ್ಮಿಸಲ್ಪಟ್ಟ ಕೋಟೆಗಳು ಹಾಗೂ ಅರಮನೆಗಳು ಸೇರಿದಂತೆ ಇತರ ಸ್ಮಾರಕಗಳನ್ನುಅಭಿವೃದ್ಧಿಪಡಿಸಿ ಉತ್ತಮ ನಿರ್ವಹಣೆ ಮಾಡಲು ಈ ನಿಧಿಯನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದರು. ಇದು ಮಹಾರಾಷ್ಟ್ರ ನವನಿರ್ಮಾಣ್ ಸೇನಾದ ಹಲವು ಸಮಯದ ಬೇಡಿಕೆಯೂ ಆಗಿದೆ.
ರಾಜ್ಯದಲ್ಲಿ ಮುಂದೆ ನಡೆಯಲಿರುವ ಸ್ಥಳೀಯ ಚುನಾವಣೆಗಳನ್ನು ಗಮನದಲ್ಲಿರಿಸಿ ಈ ಯೋಜನೆಯನ್ನು ಘೋಷಿಸಲಾಗಿದೆ ಹಾಗೂ ಇದು ಕೇವಲ ಒಂದು ಚುನಾವಣಾ ಸ್ಟಂಟ್ ಎಂದು ಅವರು ಹೇಳಿದರು.







