ಹಾಗಲಕಾಯಿ: ನಾಲಗೆಗೆ ಮಾತ್ರ ಕಹಿ, ಆರೋಗ್ಯಕ್ಕೆ ಬಹಳ ಸಿಹಿ
ದಿನಕ್ಕೊಂದು ತರಕಾರಿ

ಹಾಗಲಕಾಯಿ - ಈ ತರಕಾರಿ ಹೆಸರು ಕೇಳಿದರೇ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಕಾರಣ ಈ ತರಕಾರಿಯಲ್ಲಿರುವ ಕಹಿಯ ಅಂಶ. ಆದರೆ ವಾಸ್ತವವಾಗಿ ಈ ತರಕಾರಿ ನಾಲಗೆಗೆ ಮಾತ್ರ ಕಹಿ, ಆರೋಗ್ಯಕ್ಕೆ ಬಹಳ ಸಿಹಿಯೆಂದು ಸಾಬೀತಾಗಿದ್ದು, ಅದರಲ್ಲಿರುವ ಫೈಟೋ ಕೆಮಿಕಲ್ ಕಂಪೌಂಡುಗಳು ನಮ್ಮ ಆರೋಗ್ಯ ವರ್ಧಿಸಿ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.
ಕುಕುರ್ಬಿಟಿಏಸಿಯಾ ಎಂಬ ಬೊಟಾನಿಕಲ್ ಕುಟುಂಬಕ್ಕೆ ಸೇರಿದಈ ತರಕಾರಿ ಕಲ್ಲಂಗಡಿ ಹಣ್ಣು, ಮುಳ್ಳು ಸೌತೆಕಾಯಿ ಜಾತಿಗೆ ಸೇರಿದ ತರಕಾರಿಯಾಗಿದೆ. ಇದರ ವೈಜ್ಞಾನಿಕ ಹೆಸರು ಮೊಮರ್ಡಿಕಾ ಚರಂಟಿಯ.

ಹಾಗಲಕಾಯಿ ಹೇಗೆ ಆರೋಗ್ಯ ವರ್ಧಕ ?
► ಈ ತರಕಾರಿಯಲ್ಲಿ ಕ್ಯಾಲರಿಯಂಶ ಬಹಳಷ್ಟು ಕಡಿಮೆಯಾಗಿದ್ದು, ಪ್ರತಿ 100 ಗ್ರಾಮ್ ಗೆ ಕೇವಲ 17 ಆಗಿದೆ. ಅದರ ಮೇಲ್ಮೈ ಪದರ ಫೈಟೋ ನ್ಯೂಟ್ರಿಯಂಟ್ ಗಳಾದ ನಾರಿನಂಶ, ಖನಿಜಾಂಶಗಳು, ವಿಟಮಿನ್ ಹಾಗೂ ಆ್ಯಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ.
► ಅದರಲ್ಲಿರುವ ಪೊಲಿಪೆಪ್ಟಿಟೈಡ್-ಪಿ ಎಂಬ ಫೈಟೋ ನ್ಯೂಟ್ರಿಯಂಟ್ ಒಂದು ಪ್ಲಾಂಟ್ ಇನ್ಸುಲಿನ್ ಆಗಿದ್ದು, ದೇಹದಲ್ಲಿನ ಸಕ್ಕರೆಯಂಶವನ್ನು ಕಡಿಮೆಗೊಳಿಸುತ್ತದೆ.
► ಅದರ ಮೇಲ್ಮೈ ಪದರವು ಫೊಲೇಟ್ ಗಳಿಂದ ಸಮೃದ್ಧವಾಗಿದ್ದು, ವಿಟಮಿನ್ ಫೊಲೇಟ್ ತೆಗೆದುಕೊಳ್ಳುವ ಗರ್ಭಿಣಿಯರಿಗೆ ಮುಂದೆ ಹುಟ್ಟುವ ಮಕ್ಕಳಲ್ಲಿ ನ್ಯೂರಲ್ ಟ್ಯೂಬ್ ದೋಷಗಳು ಕಂಡು ಬರುವ ಸಾಧ್ಯತೆ ಕಡಿಮೆ ಎಂದು ಈಗಾಗಲೇ ಸಾಬೀತಾಗಿದೆ.
► ತಾಜಾ ಹಾಗಲಕಾಯಿಯಲ್ಲಿವಿಟಮಿನ್ ಸಿ ಹೇರಳವಾಗಿದೆ. ಪ್ರತಿ 100 ಗ್ರಾಂನಲ್ಲಿ 84 ಎಂಜಿಯಷ್ಟು ವಿಟಮಿನ್ ಸಿ ಇದೆ.
► ಹಾಗಲಕಾಯಿಯಲ್ಲಿ ಆರೋಗ್ಯ ವರ್ಧಕಗಳಾದ ಕ್ಯಾರೊಟೀನ್, ಲುಟೀನ್ ಹಾಗೂ ಝಿಯಾ-ಕ್ಷಂತಿನ್ ಇವೆಯಲ್ಲದೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಕೂಡ ಇದೆ.
►ಹಾಗಲಕಾಯಿ ಸೇವಿಸುವವರ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ ಹಾಗೂ ಅಜೀರ್ಣ ಮತ್ತು ಮಲಬದ್ಧತೆಯನ್ನು ಅದು ನಿವಾರಿಸುತ್ತದೆ.
► ಹಾಗಲಕಾಯಿಯಲ್ಲಿ ಸಾಕಷ್ಟು ವಿಟಮಿನ್ ಬಿ ಹಾಗೂ ಖನಿಜಾಂಶಗಳಾದ ಕಬ್ಬಿಣ ಸತ್ವ, ಪೊಟಾಶಿಯಂ, ಮ್ಯಾಂಗನೀಸ್ ಹಾಗೂ ಮ್ಯಾಗ್ನೀಸಿಯಂ ಕೂಡ ಇದೆ.
► ಸದ್ಯ ನಡೆಯುತ್ತಿರುವ ಕೆಲವೊಂದು ವೈಜ್ಞಾನಿಕ ಸಂಶೋಧನೆಗಳ ಆರಂಭಿಕ ಫಲಿತಾಂಶಗಳಿಂದ ತಿಳಿದು ಬಂದಂತೆ ಹಾಗಲಕಾಯಿಯಲ್ಲಿರುವ ಕೆಲವೊಂದು ಫೈಟೋ-ಕೆಮಿಕಲ್ ಕಂಪೌಂಡುಗಳು ಎಚ್ ಐ ವಿ ಚಿಕಿತ್ಸೆಯಲ್ಲೂ ಪರಿಣಾಮಕಾರಿಯಾಗಬಹುದು.







