ಸರಕಾರ ಜನರದ್ದೆಂದು ನೆನಪಿರಲಿ: ಪಿಣರಾಯಿ

ತಿರುವನಂತಪುರಂ,ಡಿ.27: ರಾಜ್ಯದಲ್ಲಿ ಎಲ್‌ಡಿಎಫ್ ಅಧಿಕಾರದಲ್ಲಿ ಇದ್ದರೂ ಸರಕಾರ ಜನರದ್ದೆನ್ನುವುದು ನೆನಪಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸರಕಾರಿ ಕ್ರಮಗಳು ತೀರ್ಮಾನಗಳು ಜನರಿಗಾಗಿರಬೇಕು. ಅಲ್ಲಿ ವ್ಯಕ್ತಿ, ರಾಜಕೀಯ ಹಿತಾಸಕ್ತಿಗಳಿಗೆ ಸ್ಥಾನವಿಲ್ಲ ಎಂದು ಸರಕಾರದ ಟೀಕಾಕಾರಿಗೆ ಕಟು ಉತ್ತರ ನೀಡಿದ್ದಾರೆ.
ಅವರು ಮುಖ್ಯಮಂತ್ರಿ, ಇತರ ಸಚಿವರ ವೈಯಕ್ತಿಕ ಸಿಬ್ಬಂದಿಗಳ ಸಭೆಯಲ್ಲಿ ಮಾತಾಡುತ್ತಿದ್ದರು.
ಭ್ರಷ್ಟಾಚಾರವನ್ನುಯಾವ ಕಾರಣಕ್ಕೂ ಸಹಿಸಲಾಗದು. ಕಳೆದಸರಕಾರದ ಸಮಯದಲ್ಲಿ ಕೆಳಗಿನಿಂದ ಮೇಲಿನವರೆಗೂ ಭ್ರಷ್ಟಾಚಾರ ರಾರಾಜಿಸುತ್ತಿತ್ತು. ಇದರಿಂದ ಹತಾಶ ಜನರು ಎಲ್‌ಡಿಎಫ್‌ನ್ನು ಗೆಲ್ಲಿಸಿದ್ದಾರೆ. ಆ ನೆನಪು ಪರ್ಸನಲ್ ಸ್ಟಾಫ್‌ಗಳಲ್ಲಿರಬೇಕು. ವಿವಿಧ ಕಚೇರಿಗಳಿಗೆ ಕೆಲವರು ಈಗಲೂ ಚೀಲ ಹಿಡಿದುಕೊಂಡು ಹೋಗಿ ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಇವರು ದೂರುದಾರರನ್ನು ಕರೆದುಕೊಂಡು ಕಚೇರಿಗಳಿಗೆ ಬರುತ್ತಾರೆ. ಇವರು ಮಧ್ಯವರ್ತಿಗಳಾಗಿರುತ್ತಾರೆ. ದೂರುದಾರರನ್ನು ಹೊರಗೆ ನಿಲ್ಲಿಸಿ ಮಧ್ಯವರ್ತಿಗಳು ಸಚಿವರ ಕಚೇರಿಯ ಒಳಗೆ ಬರುತ್ತಾರೆ. ದೂರುದಾರರ ಕಾರಣಗಳನ್ನು ಪರ್ಸನಲ್ ಸ್ಟಾಫ್‌ಗಳೊಡನೆ ಚರ್ಚಿಸುತ್ತಾರೆ. ಹೊರಗೆ ಇರುವ ದೂರುದಾರರಲ್ಲಿ ವ್ಯವಹಾರ ಕುದುರಿದೆ ಎಂದು ಹೇಳುತ್ತಾರೆ. ಸಹಜವಾಗಿ ನಡೆದ ಕೆಲಸಕ್ಕೂ ಅವರು ದೂರುದಾರರಿಂದ ಹಣವನ್ನು ಪಡೆಯುತ್ತಾರೆ ಇಂತಹವರನ್ನು ದೂರವಿರಿಸಬೇಕೆಂದು ಮುಖ್ಯಮಂತ್ರಿ ಸಲಹೆ ನೀಡಿದರು ಎಂದು ವರದಿ ತಿಳಿಸಿದೆ.







