ಡಿ.29ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೈಸೂರಿಗೆ
17ನೆ ರಾಷ್ಟ್ರೀಯ ಜಾಂಬೂರಿ ಸಮಾವೇಶ

ಮಂಗಳೂರು, ಡಿ.27: ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ 17ನೆ ರಾಷ್ಟ್ರೀಯ ಜಾಂಬೂರಿ ಸಮಾವೇಶವು ಡಿ.29ರಿಂದ ಜ.4ರವರೆಗೆ ಮೈಸೂರು-ನಂಜನಗೂಡು ನಡುವಿನ ಅಡಕನಹಳ್ಳಿ ಕೆಐಎಡಿಬಿ ಕೈಗಾರಿಕೆ ಪ್ರದೇಶದಲ್ಲಿ ನಡೆಯಲಿದೆ ಎಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಆಯುಕ್ತ ರಾಮಶೇಷ ಶೆಟ್ಟಿ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ 3ನೆ ರಾಷ್ಟ್ರೀಯ ಜಾಂಬೂರು ಸಮಾವೇಶ ಇದಾಗಿದೆ. ಡಿ.29ರಂದು ಜಾಂಬೂರಿ ಸಮಾವೇಶವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ವಜುಭಾಯ್ ರೂಢಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಮಾವೇಶದಲ್ಲಿ ಸುಮಾರು 30,000 ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳು ರಾಷ್ಟ್ರದ ಎಲ್ಲ ರಾಜ್ಯಗಳಿಂದ ಆಗಮಿಸಲಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ. ಜಿಲ್ಲಾ ಸಂಸ್ಥೆಯಿಂದ 231 ಜನರು ಭಾಗವಹಿಸಲಿದ್ದಾರೆ. ಈ ಸಮಾವೇಶಕ್ಕಾಗಿ 10 ಕೋ.ರೂ. ಸರಕಾರದಿಂದ ಅನುದಾನ ನೀಡಿದ್ದು, 5 ಕೋ.ರೂ. ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ವಾಸುದೇವ ಬೋಳೂರು ಉಪಸ್ಥಿತರಿದ್ದರು.







