ಮಣಿಪಾಲ ವಿವಿ ಆಸ್ತಿಗಳ ಬಗ್ಗೆ ಪರೀಶಿಲನೆಗೆ ಕಾರ್ಯಪಡೆ ರಚನೆ
ಉಡುಪಿ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯ

ಉಡುಪಿ, ಡಿ.27: ಮಣಿಪಾಲ ವಿಶ್ವವಿದ್ಯಾನಿಲಯದ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಕಾನೂನು ಸಲಹೆಗಾರರನ್ನೊಳಗೊಂಡ ಕಾರ್ಯ ಪಡೆ ರಚಿಸುವ ಕುರಿತು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯಸಭೆ ಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಶಾಂತ್ ಭಟ್, ಮಣಿಪಾಲದ ರಸ್ತೆಯಲ್ಲಿ ನಿಲ್ಲಿಸಲಾದ ವಾಹನಗಳಿಗೆ ಮಣಿಪಾಲ ವಿವಿಯವರು ಟ್ರಾಫಿಕ್ ಪೊಲೀಸರು ಹಾಕುವಂತಹ ಲಾಕ್‌ಗಳನ್ನು ಹಾಕುತ್ತಿದ್ದಾರೆ. ಇವರಿಗೆ ಈ ಅಧಿಕಾರ ನೀಡಿದವರು ಯಾರು? ಇದರ ವಿರುದ್ಧ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟ ವಿವಿಯವರಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಯುವರಾಜ್ ಮಾತನಾಡಿ, ಮೊದಲು ಮಣಿಪಾಲ ವಿವಿಯವರ ಆಸ್ತಿ, ಆದಾಯ, ತೆರಿಗೆ ಬಗ್ಗೆ ಸಂಶಯ ಇರುವುದರಿಂದ ಆ ಕುರಿತು ಪರಿಶೀಲನೆ ಮಾಡಬೇಕು. ಅದಕ್ಕಾಗಿ ತಂಡ ರಚನೆ ಮಾಡಬೇಕೆಂದರು.
ನಗರಸಭೆ ಸಂಬಂಧಿಸಿದ ರಸ್ತೆಗಳನ್ನು ಮಣಿಪಾಲ ವಿವಿಯವರು ಗೇಟು ಹಾಕುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ನಗರಸಭೆ ಹಾಗೂ ಕಂದಾಯ ಇಲಾಖೆಯವರು ಸೇರಿ ಚರ್ಚಿಸಬೇಕಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು. ಅದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸುವಂತೆ ಮಹೇಶ್ ಠಾಕೂರು ಸಲಹೆ ನೀಡಿದರು. ಅದಕ್ಕಾಗಿ ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಅವರನ್ನು ಸೇರಿಸಿ ಕಮಿಟಿ ರಚಿಸಬೇಕೆಂದು ಯಶ್ಪಾಲ್ ಸುವರ್ಣ ಹೇಳಿದರು.
ಮತ್ತೆ ಪ್ರತಿಧ್ವನಿಸಿದ ಟೆಂಡರ್:
ನಗರಸಭೆ ಖಾಸಗಿಯವರ ಮೂಲಕ ಅಭಿವೃದ್ಧಿಗೊಳಿಸಲು ನಿರ್ಣಯಿಸಿರುವ ವಿಶ್ವೇಶ್ವರಯ್ಯ ಕಟ್ಟಡದ ಕಾಮ ಗಾರಿಗೆ ಮರುಟೆಂಡರ್ ಕರೆಯುವಂತೆ ಸರಕಾರ ನಿರ್ದೇಶನ ನೀಡಿರುವ ಬಗ್ಗೆ ಪ್ರಸ್ತಾಪಿಸಿದ ಯಶ್ಪಾಲ್ ಸುವರ್ಣ, ಇದು ನಗರಸಭೆಗೆ ಆಗಿರುವ ಮುಖಭಂಗ. ಹೀಗಾಗಿ ಇನ್ನು ಮುಂದೆ ಈ ರೀತಿ ಆಗದಂತೆ ಮೊದಲು ಸಭೆ ಕರೆದು ಚರ್ಚಿಸಿ ಮರುಟೆಂಡರ್‌ಗೆ ಅವಕಾಶ ಕಲ್ಪಿಸಿ ಎಂದರು.
ಅಜೆಂಡಾದಲ್ಲಿರುವ ಈ ವಿಚಾರವನ್ನು ಪ್ರಶ್ನೋತ್ತರ ವೇಳೆ ಪ್ರಸ್ತಾಪಿಸಿದಕ್ಕೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿ, ಬೇರೆ ವಿಷಯ ಚರ್ಚಿಸುವಂತೆ ಸೂಚಿಸಿದರು. ಆದರೆ ಪಟ್ಟು ಬಿಡದ ವಿರೋಧ ಪಕ್ಷದ ಸದಸ್ಯರು ಬಾವಿಗೆ ಇಳಿದು ಉತ್ತರಕ್ಕಾಗಿ ಒತ್ತಾಯಿಸಿದರು. ವಿಶ್ವೇಶ್ವರಯ್ಯ ಕಟ್ಟಡಕ್ಕಿಂತ ನೀರಿನ ಸಮಸ್ಯೆ ಗಂಭೀರವಾಗಿದ್ದು, ಮೊದಲು ಆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ರಮೇಶ್ ಕಾಂಚನ್ ಆಗ್ರಹಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಗೊಂದಲ ನಿರ್ಮಾಣವಾಯಿತು.
ಬಳಿಕ ಉತ್ತರಿಸಿದ ಅಧಿಕಾರಿ, ತಾಂತ್ರಿಕ ಸಮಸ್ಯೆಯಿಂದ ಟೆಂಡರ್‌ನ್ನು ವಾಪಾಸ್ಸು ಕಳುಹಿಸಿರುವ ಸರಕಾರ, ಮರು ಟೆಂಡರ್ ಕರೆಯುವಂತೆ ನಿರ್ದೇಶನ ನೀಡಿದೆ ಎಂದರು. ದಾಖಲೆ ಸರಿ ಇಲ್ಲದ ಕಾರಣ ಟೆಂಡರ್ ರದ್ದುಗೊಂಡಿದೆ. ಆದುದರಿಂದ ಮೊದಲು ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದು ಯಶ್ಪಾಲ್ ಸುವರ್ಣ ಹೇಳಿದರು.
5 ತಿಂಗಳಿಗೆ ಬೇಕಾಗುವ ನೀರು:
ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನವರಿ ತಿಂಗಳಲ್ಲಿ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಇಂಜಿನಿಯರ್ ಶಶಿಧರ್ ಶೆಟ್ಟಿ ಮಾತನಾಡಿ, ಮುಂದಿನ ಐದು ತಿಂಗಳಿಗೆ ಬೇಕಾಗುವ ನೀರನ್ನು ಶಿರೂರು ಹಾಗೂ ಬಜೆ ಡ್ಯಾಂಗಳಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿ ಇನ್ನು 10 ದಿನಗಳಲ್ಲಿ ಒಳಹರಿವು ನಿಲ್ಲಬಹುದು. ಹೀಗಾಗಿ ನದಿಯಲ್ಲಿನ ಬಂಡೆಗಳನ್ನು ತೆಗೆದರೆ ಇನ್ನಷ್ಟು ನೀರು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದರು.
ನೀರಿನ ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 42 ಬಾವಿ ಹಾಗೂ ಕೊಳವೆ ಬಾವಿಗಳನ್ನು ಗುರುತಿಸಿದ್ದೇವೆ. ಮುಂದೆ ಅದನ್ನು ದುರಸ್ತಿ ಮಾಡಿ ನೀರು ಉಪಯೋಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜನವರಿ ತಿಂಗಳಿನಿಂದ ಸ್ವರ್ಣ ನದಿಯ ನೀರನ್ನು ರೈತರು ಬಳಕೆ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪೌರಾಯುಕ್ತರು ಹೇಳಿದರು.
ಗ್ರಾಪಂಗಳಿಗೆ ನೀಡುವ ನೀರನ್ನು ಕೂಡ ಜನವರಿ ತಿಂಗಳಲ್ಲಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ನಗರದ ಜನರೆ ತೊಂದರೆ ಪಡಬೇಕಾಗುತ್ತದೆ ಎಂದು ಜನಾರ್ದನ ಭಂಡಾರ್ಕರ್ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.
ಕೆಂಡಮಂಡಲರಾದ ಪೌರಾಯುಕ್ತರು!
ಅಕ್ರಮ ಕಟ್ಟಡದಲ್ಲಿ ಪೌರಾಯುಕ್ತರ ಹೆಸರು ಕೇಳಿಬರುತ್ತಿವೆ ಎಂಬ ವಿಪಕ್ಷ ನಾಯಕ ಡಾ.ಎಂ.ಆರ್.ಪೈ ಆರೋಪಕ್ಕೆ ಕೆಂಡಮಂಡಲರಾದ ಪೌರಾಯುಕ್ತ ಡಿ.ಮಂಜುನಾಥಯ್ಯ, ನಾನು ಯಾರ ಆಸ್ತಿಯನ್ನು ತಿಂದಿಲ್ಲ. ನನ್ನ ಬಗ್ಗೆ ಸುಮ್ಮನೆ ವೈಯಕ್ತಿಕ ಆರೋಪ ಮಾಡಬೇಡಿ. ನಿಮ್ಮ ಬಗ್ಗೆ ನನಗೂ ಆರೋಪ ಮಾಡಬಹುದು. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವೇ ಹೀಗೆ ಮಾತನಾಡಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಆಗ್ರಹ
ಉಡುಪಿ ನಗರಸಭೆಯಿಂದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವ ಕುರಿತು ಹಿಂದಿನ ಸಭೆಯಲ್ಲಿ ನಿರ್ಣಯ ಮಾಡಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಸದಸ್ಯ ಗಣೇಶ್ ನೆರ್ಗಿ ಹೇಳಿದರು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು. ಮುಂದಿನ ಎ.14ರೊಳಗೆ ಪ್ರತಿಮೆ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ನೇರ್ಗಿ ವಿನಂತಿಸಿಕೊಂಡರು.







