ದಾವೂದ್ ಅಥವಾ ಯಾಕೂಬ್ ಎಂದು ಹೆಸರಿಡಬೇಡಿ ಎಂಬ ಬಿಟ್ಟಿ ಸಲಹೆಗೆ ನೀಡಿದ ಅತ್ಯುತ್ತಮ ಉತ್ತರ ಏನು ಗೊತ್ತೇ ?

ಬಾಲಿವುಡ್ ಸ್ಟಾರ್ ಜೋಡಿ ಸೈಫ್ ಅಲಿ ಖಾನ್ ಹಾಗು ಕರೀನಾ ಕಪೂರ್ ಇತ್ತೀಚಿಗೆ ತಮ್ಮ ಗಂಡು ಮಗುವಿಗೆ ತೈಮೂರ್ ಅಲಿ ಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು ನಿಮಗೆ ಗೊತ್ತೇ ಇದೆ.
' ಆಕ್ರಮಣಕಾರ' ತೈಮೂರ್ ಬಿಟ್ಟು ಬೇರೆ ಹೆಸರು ಸಿಗಲಿಲ್ಲವೇ ಎಂದು ಕೇಳಿದರೆ , ಅವರ ಮಗುವಿಗೆ ಅವರಿಗೆ ಬೇಕಾದ ಹೆಸರು ಇಡುತ್ತಾರೆ , ನಿಮಗ್ಯಾಕೆ ಅದರ ತಲೆಬಿಸಿ ? ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು.
ಅದರ ಬೆನ್ನಿಗೆ ಮೊನ್ನೆ ಡಿಸೇಂಬರ್ 20 ಕ್ಕೆ ಭಾರತದ ಆಲ್ ರೌನ್ದರ್ ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಬೇಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಕುಟುಂಬಕ್ಕೆ ಜೂನಿಯರ್ ಪಠಾಣ್ ಆಗಮನದ ಸಂಭ್ರಮವನ್ನು ತಂದೆ ಇರ್ಫಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.
ಅದರ ಬೆನ್ನಿಗೇ ಇರ್ಫಾನ್ ದಂಪತಿಗೆ ಕೆಲವರು ಸಲಹೆ ನೀಡಿದರು. ಒಬ್ಬ ಅಭಿಮಾನಿಯಂತೂ " ನಿಮ್ಮ ಮಗುವಿಗೆ ದಾವೂದ್ ಅಥವಾ ಯಾಕೂಬ್ ಎಂದು ಹೆಸರಿಡಬೇಡಿ " ಎಂದು ಹೇಳಿಬಿಟ್ಟ. ಕೇಳದೆಯೇ ನೀಡಿದ ಈ ಬಿಟ್ಟಿ ಸಲಹೆಗೆ ಮೃದುವಾಗಿಯೇ ಪ್ರತಿಕ್ರಿಯಿಸಿದ ಇರ್ಫಾನ್ ಮಾತ್ರ ಅತ್ಯುತ್ತಮ ಉತ್ತರವನ್ನೇ ಕೊಟ್ಟರು.
" ಹೆಸರು ಯಾವುದಿಟ್ಟರೂ ಆತ ತನ್ನ ತಂದೆ ಮತ್ತು ದೊಡ್ಡಪ್ಪನ ಹಾಗೆ ಮುಂದೆ ದೇಶದ ಹೆಸರು ಬೆಳಗುವವನಾಗುತ್ತಾನೆ " ಎಂದು ಹೇಳಿದರು ಇರ್ಫಾನ್ !
ಅಂದ ಹಾಗೆ ಇರ್ಫಾನ್ ತನ್ನ ಪುತ್ರನಿಗೆ ಇಮ್ರಾನ್ ಎಂದು ಹೆಸರಿಟ್ಟಿದ್ದಾರೆ.







