ಖಾಸಗಿವಲಯದಲ್ಲೂ ಮೀಸಲಾತಿ: ಸಿದ್ದರಾಮಯ್ಯ ಒಲವು

ಬೆಂಗಳೂರು, ಡಿ.27: ಸಮಾಜದ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಖಾಸಗಿ ವಲಯದಲ್ಲೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಭಾರತೀಯ ವಕೀಲರ ಸಂಘ ಹಮ್ಮಿಕೊಂಡಿದ ‘ಸಂವಿಧಾನ, ಸುಪ್ರೀಂ ಕೋರ್ಟ್ ಮತ್ತು ಸಾಮಾಜಿಕ ನ್ಯಾಯ’ ಕುರಿತ 9ನೆ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತೀಯತೆ ಹಾಗೂ ಅಸ್ಪೃಶ್ಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಹೀಗಾಗಿ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲೆಲ್ಲಿ ಮೀಸಲಾಗಿ ಅಗತ್ಯವಿದೆಯೋ ಅಲ್ಲೆಲ್ಲ ಅವಕಾಶ ಕಲ್ಪಿಸಿದಾಗ ಮಾತ್ರ ಎಲ್ಲ ಸಮುದಾಯದ ಜನತೆ ಸಮಾನ ರೀತಿಯಲ್ಲಿ ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಇತ್ತೀಚಿಗಷ್ಟೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಅಂಕಿ ಅಂಶಗಳಿಗಾಗಿ ತಾವು ಕಾಯುತ್ತಿದ್ದು, ವರದಿ ಬಂದ ನಂತರ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತಿಸಲಾಗುವುದು. ಈ ಹಿಂದೆಯೇ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಖಾಸಗಿ ವಲಯದಲ್ಲಿ ಶೇ.27ರಷ್ಟು ಮೀಸಲಾತಿಗೆ ಶಿಫಾರಸು ಮಾಡಿದೆ. ಆದರೆ, ಅದು ಇದುವರೆಗೂ ಜಾರಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯವು ಜನರಿಗೆ ಸಾಮಾಜಿಕ ಘನತೆ ಹೆಚ್ಚಿಸುವುದರ ಜೊತೆಗೆ, ಸಂಪನ್ಮೂಲ, ಉದ್ಯೋಗಾವಕಾಶ ಹಾಗೂ ಅಧಿಕಾರಗಳನ್ನು ಸಮಾನವಾಗಿ ಹಂಚುವ ನಿಟ್ಟಿನಲ್ಲಿ ಸಹಾಯವಾಗಲಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಸಮಾಜ ಪರಿವರ್ತನೆ ಆಗದ ಹೊರತು ಯಾವುದೇ ರಾಜಕೀಯ ಹಕ್ಕುಗಳಿಗೆ ಬೆಲೆ ಇರುವುದಿಲ್ಲ ಎಂದಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಕಳೆದ ವರ್ಷ ಸರಕಾರ ನಡೆಸಿದ ಜಾತಿಗಣತಿ ರಾಷ್ಟ್ರದಲ್ಲೇ ನಡೆಸಿದ ಪ್ರಥಮ ಜಾತಿವಾರು ಗಣತಿಯಾಗಿದ್ದು, ಇದರಿಂದ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಬಹಳ ಸಹಕಾರಿಯಾಗಲಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಒದಗಿಸುವುವಲ್ಲಿ ನ್ಯಾಯಾಂಗದ ಸಹಕಾರ ಅತ್ಯಗತ್ಯ ಎಂದು ಅವರು ಅಭಿಪ್ರಾಯಿಸಿದರು.
ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ನ್ಯಾಯಾಲಯ ಜನರಿಗೆ ನ್ಯಾಯ ಒದಗಿಸುವುದು ಎಷ್ಟು ಮುಖ್ಯವೋ ಸಕಾಲದಲ್ಲಿ ನ್ಯಾಯ ಒದಗಿಸುವುದು ಅಷ್ಟೇ ಮುಖ್ಯ. ವಿಳಂಬವಾದರೆ ನ್ಯಾಯವು ಸತ್ತಂತೆ. ಸರಕಾರಗಳ ಶೇ.70 ರಷ್ಟು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದು, ಲೋಕಾ ಅದಾಲತ್‌ನ್ನು ಸರಕಾರಿ ಪ್ರಕರಣಗಳಿಗೂ ವಿಸ್ತರಿಸಬೇಕು. ಕೋರ್ಟ್ ಮೆಟ್ಟಿಲೇರಿದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಸವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಆರ್.ಎಸ್. ಚೀಮಾ, ಪಿ.ಪಿ. ರಾವ್, ಭಾರತೀಯ ವಕೀಲರ ಸಂಘದ ಅಧ್ಯಕ್ಷ ಜಿತೇಂದ್ರ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.







