ಪಾಕ್: ಕ್ರಿಸ್‌ಮಸ್ ಮುನ್ನಾದಿನ ಕಳ್ಳಭಟ್ಟಿ ಕುಡಿದು 30 ಮಂದಿ ಸಾವು

ಲಾಹೋರ್, ಡಿ.27: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ರಿಸ್‌ಮಸ್‌ನ ಮುನ್ನಾ ದಿನ ವಿಷಪೂರಿತ ಕಳ್ಳಭಟ್ಟ ಮದ್ಯ ಸೇವಿಸಿದ ಪರಿಣಾಮವಾಗಿ ಬಹುತೇಕ ಕ್ರೈಸ್ತರು ಸೇರಿದಂತೆ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 60 ಮಂದಿ ಅಸ್ವಸ್ಥರಾಗಿದ್ದಾರೆ.
ಡಿಸೆಂಬರ್ 24ರಂದು ಲಾಹೋರ್‌ನ ಟೊಬಾ ಟೆಕ್ ಸಿಂಗ್ ನಗರದಲ್ಲಿರುವ ಮುಬಾರಕ್‌ಬಾದ್ ಕ್ರೈಸ್ತ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಕಳ್ಳಭಟ್ಟಿ ದುರಂತದ ತನಿಖೆಗಾಗಿ, ವಿಚಾರಣಾ ಸಮಿತಿಯೊಂದನ್ನು ಅಧಿಕಾರಿಗಳು ರಚಿಸಿದ್ದಾರೆ. ವಿಷಪೂರಿತ ಮದ್ಯವನ್ನು ಆಕ್ರಮವಾಗಿ ತಯಾರಿಸಿದ ಆರೋಪದಲ್ಲಿ, ಓರ್ವ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆಯೆಂದು ಲಾಹೋರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಮದ್ಯತಯಾರಿಕಾ ಘಟಕಗಳ ಕಾರ್ಯನಿರ್ವಹಗೆ ಅನುಮತಿ ನೀಡಲಾಗಿದ್ದರೂ, ಮುಸ್ಲಿಮರಿಗೆ ಮದ್ಯಮಾರಾಟ ಹಾಗೂ ಮದ್ಯಸೇವನೆಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿಹಬ್ಬದ ಆಚರಣೆಯಲ್ಲಿ ಸಂದರ್ಭದಲ್ಲಿ ಕಳ್ಳಭಟ್ಟಿ ಮದ್ಯವನ್ನು ಸೇವಿಸಿದ್ದರಿಂದ 35 ಮಂದಿ ಹಿಂದೂಗಳು ಸಹಿತ ಒಟ್ಟು 45 ಮಂದಿ ಸಾವನ್ನಪ್ಪಿದ್ದರು.





