ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ
.jpg)
ಸಾಗರ, ಡಿ.27: ತಾಲೂಕಿನ ಎಸ್.ಎಸ್. ಬೋಗ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡಕಟ್ಟು ಜನರ ಸಮುದಾಯದ ಹಕ್ಕಿನ ಅರ್ಜಿಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವ ಪಂಚಾಯತ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಕರೂರು ಹೋಬಳಿಯ ಎಸ್.ಎಸ್. ಬೋಗ್ ಗ್ರಾಮ ಪಂಚಾಯತ್‌ಗೆ ಹಸಲರು ಬುಡಕಟ್ಟು ಜನರು 2006ರ ಅರಣ್ಯಹಕ್ಕು ಕಾಯ್ದೆಯಡಿ ಬಿ ನಮೂನೆಯಲ್ಲಿ ಸಮುದಾಯ ಹಕ್ಕುಗಳ ಮಂಜೂರಾತಿಗೆ ಅರ್ಜಿಯನ್ನು ದಾಖಲೆ ಸಮೇತ ಗ್ರಾಮ ಪಂಚಾಯತ್‌ಗೆ ನೀಡಿದರೆ ಪಡೆಯಲು ನಿರಾಕರಿಸುತ್ತಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರನ್ನು, ಪೊಲೀಸರನ್ನು ಕರೆಸಿ, ಆದಿವಾಸಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಗ್ರಾಮ ಅರಣ್ಯ ಸಮಿತಿ ತಮ್ಮ ಜವಾಬ್ದಾರಿ ಮರೆತಿದ್ದಾರೆ.
ಬುಡಕಟ್ಟು ಜನರಿಗೆ ಅರಣ್ಯಹಕ್ಕು ಕಾಯ್ದೆ 3ನೆ ನಿಯಮದಲ್ಲಿ ಕೊಡಮಾಡಿರುವ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು ಸರಿಯಾದ ಕ್ರಮವಲ್ಲ. ಅಲ್ಲದೆ, 13ನೆ ನಿಯಮದ ಪ್ರಕಾರ ಸೂಕ್ತ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿದಾಗ ಅದನ್ನು ನಿರಾಕರಿಸುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಕ್ಷಣ ಎಸ್.ಎಸ್. ಬೋಗ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೂರು ಗ್ರಾಮದ ಹಸಲರು ಬುಡಕಟ್ಟು ಜನರ ಸಮುದಾಯದ ಹಕ್ಕಿನ ಅರ್ಜಿಯನ್ನು ಸ್ವೀಕರಿಸಿ ಕೂಡಲೇ ಹಕ್ಕುಪತ್ರ ನೀಡಬೇಕು. ಹೊಸನಗರ ತಾಲೂಕಿನ ಮಂಜಗಳಲೆ, ಅರಮನೆಕೊಪ್ಪ, ಅಂಡಗದೂರು ಮತ್ತು ಸಾಗರ ತಾಲೂಕಿನ ಅರಬಿಳ್ಳಿ, ವಳಗೆರೆ, ತುಮರಿ ಗ್ರಾಮದಲ್ಲಿರುವ ಅರಣ್ಯಹಕ್ಕಿನ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು.
ಬಾಕಿ ಇರುವ ಅರಣ್ಯ ಹಕ್ಕುಪತ್ರವನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿಯ ನಾಗರಾಜ ಏಳಿಗೆ, ಚಂದ್ರಶೇಖರ ತುಮರಿ, ಮಂಜುನಾಥ್, ಗಣಪತಿ ಕೆ.ಟಿ., ದುರ್ಗಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಪ್ರಮುಖರಾದ ರೇವಪ್ಪಹೊಸಕೊಪ್ಪ, ಅಣ್ಣಪ್ಪಬಾಳೆಗುಂಡಿ, ಧರ್ಮಣ್ಣ, ಸೆಬಾಸ್ಟಿನ್ ಗೋಮ್ಸ್ ಇನ್ನಿತರರು ಹಾಜರಿದ್ದರು.







