‘ಆದಿವಾಸಿಗಳ ಸ್ಥಳಾಂತರ ಸಲ್ಲದು’
ಶಿವಮೊಗ್ಗ, ಡಿ.27: ಬೃಹತ್ ಪ್ರಮಾಣದಲ್ಲಿ ದೇಶದ ಜೀವವೈವಿಧ್ಯವನ್ನು ಒಂದೆಡೆ ನಾವು ಕಳೆದುಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಅರಣ್ಯವನ್ನು ಅವಲಂಬಿಸಿ ಬದುಕುತ್ತಿರುವ ಸಮುದಾಯಗಳ ಬಡತನವನ್ನು ನಿವಾರಿಸುವಲ್ಲಿಯೂ ವಿಫಲವಾಗಿದ್ದೇವೆ ಎಂದು ತಿರುವನಂತಪುರಂನ ಪರಿಸರ ನಿರ್ದೇಶನಾಲಯದ ಪರಿಸರ ತಜ್ಞ ಪ್ರೊ. ಎಸ್. ಫೈಝಿ ವಿಷಾದಿಸಿದ್ದಾರೆ. ಗರದ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಮಂಗಳವಾರದಿಂದ ಆರಂಭವಾದ ಪರಿಸರ ವೈಪರೀತ್ಯ ಮತ್ತು ಕೃಷಿ ಪ್ರಾಧಾನ್ಯದ ಕೀಟಗಳ ಹಾಗೂ ಇತರ ಪ್ರಾಣಿಗಳ ನಿರ್ವಹಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವವೈವಿಧ್ಯದಲ್ಲಿ 96,373 ಪ್ರಭೇದಗಳಿವೆ. ಸುಮಾರು 56,515 ತಳಿಯ ಸಸ್ಯಗಳಿವೆ. ಇವುಗಳನ್ನು ರಕ್ಷಿಸುತ್ತಾ ಬದುಕುತ್ತಿರುವ ಅರಣ್ಯವಾಸಿಗಳು (ಆದಿವಾಸಿಗಳು) ಸುಮಾರು ಶೇ.8.6ರಷ್ಟು ಜನಸಂಖ್ಯೆಯ ಪ್ರಮಾಣದಲ್ಲಿದ್ದಾರೆ. ಇಷ್ಟಿದ್ದರೂ ಶೇ.30ರಷ್ಟು ಅರಣ್ಯ ಅಳಿವು, ಉಳಿವಿನ ಸಮಸ್ಯೆಯಲ್ಲಿ ಸಿಲುಕಿದೆ ಎಂದರು.
ಎಲ್ಲಿ ಹೆಚ್ಚಿನ ಪ್ರಮಾಣದ, ಶ್ರೀಮಂತ ಜೀವ ವೈವಿಧ್ಯವಿದೆಯೋ ಅಲ್ಲಿ ವಾಸಿಸುವ ಜನರು ಬಡತನ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ. ಇದು ಹಿಂದಿನ ವಸಾಹತುಶಾಹಿ ಕಾಲವನ್ನು ನೆನಪಿಸುತ್ತದೆ. ಇಲ್ಲಿ ವಾಸಿಸುವ ಜನರು ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೇ, ಅಭಿವೃದ್ಧಿ ಎಂಬ ಶಬ್ದಕೇಳದೇ ಬದುಕುತ್ತಿದ್ದಾರೆ ಎಂದು ವಿಷಾದಿಸಿದರು.
ಅರಣ್ಯಜೀವ ವೈವಿಧ್ಯ ಸುಧಾರಣೆಯಾಗಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅರಣ್ಯಗಳ ಸುಸ್ಥಿರ ಬಳಕೆ, ಲಾಭಗಳ ವಿಂಗಡಣೆ, ರಕ್ಷಣೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
2,000 ಇಸವಿಯಲ್ಲಿ ಜರಗಿದ ಜೀವವೈವಿಧ್ಯ ಜಾಗತಿಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೆ ತರುವಲ್ಲಿ ಕೆಲವು ಅಡ್ಡಿ ಆತಂಕಗಳು ಎದುರಾಗಿವೆ ಎಂದರು. ಭಾರತದ ಸಂವಿಧಾನದ 39ಬಿ ವಿಧಿಯಲ್ಲಿ ಸಾರ್ವಜನಿಕರಿಗೆ ಒಳ್ಳೆಯದಾಗುವ ದೃಷ್ಟಿಯಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದುವ ಮತ್ತು ನಿಯಂತ್ರಿಸುವ ಅಧಿಕಾರ ಇದೆ. 48ಎ ವಿಧಿಯಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡಲಾಗಿದೆ. ಈ ಸುಧಾರಣೆಯು ಸುಸ್ಥಿರ ಅಭಿವೃದ್ಧಿಗೆ ಸಾಕಷ್ಟು ಕಾಣಿಕೆಯನ್ನು ನೀಡುತ್ತಿದೆ ಎಂದು ವಿವರಿಸಿದರು.
ಜೀವವೈವಿಧ್ಯ ಉಳಿಸಿಕೊಳ್ಳಲು ಡೆಹ್ರಾಡೂನ್ ನಿರ್ಣಯ ಮತ್ತು ಚೆನ್ನೈ ನಿರ್ಣಯ ಜಾರಿಯಾಗಬೇಕು. 2002ರ ಜೀವ ವೈವಿಧ್ಯ ಕಾಯ್ದೆ ಅನುಷ್ಠಾನವಾಗಬೇಕು. ಸುಬ್ರಹ್ಮಣ್ಯಂ ಸಮಿತಿ ನೀಡಿದ ವರದಿ ಪ್ರಕಾರ ರಾಷ್ಟ್ರೀಯ ಅರಣ್ಯನೀತಿ ಜಾರಿಯಾಗಬೇಕು. ಮಾನವ-ವನ್ಯಪ್ರಾಣಿಗಳ ಸಂಘರ್ಷ ನಿಲ್ಲಬೇಕು. ರಾಷ್ಟ್ರೀಯ ಜೀವವೈವಿಧ್ಯ ಕಾರ್ಯಯೋಜನೆ ರೂಪಿಸಬೇಕು. ಅರಣ್ಯ ನಿರ್ವಹಣೆಯ ಜವಾಬ್ದಾರಿ ಜನರು ಮತ್ತು ಇಲಾಖೆಯ ಜಂಟಿ ಕರ್ತವ್ಯವಾಗಬೇಕು.
ಆದಿವಾಸಿಗಳ ಸ್ಥಳಾಂತರ ಸಲ್ಲದು ಎಂದು ಹೇಳಿದರು. ವಿಚಾರಸಂಕಿರಣದಲ್ಲಿ ಮುಖ್ಯ ಆತಿಥಿಗಳಾಗಿ ಬೆಂಗಳೂರಿನ ಇಥಾಲಾಜಿಕಲ್ ಸೊಸೈಟಿಯ ಅಧ್ಯಕ್ಷೆ ಪ್ರೊ. ಗೀತಾ ಬಾಲಿ ಉಪಸ್ಥಿತರಿದ್ದರು. ಕೃಷಿ ವಿವಿ ಆಡಳಿತ ಮಂಡಳಿಯ ಸದಸ್ಯರಾದ ಎಚ್.ಎಲ್. ಹರೀಶ್, ಪ್ರೊ. ಟಿ.ಕೆ. ಸಿದ್ದರಾಮೇಗೌಡ ಹಾಜರಿದ್ದರು. ಅಧ್ಯಕ್ಷತೆಯನ್ನು ವಿವಿ ಕುಲಪತಿ ಪ್ರೊ. ಸಿ. ವಾಸುದೇವಪ್ಪ ವಹಿಸಿದ್ದರು.







