ಮೂಡುಬಿದಿರೆಯಲ್ಲಿ ನಗದು ರಹಿತ ಎಚ್‌ಪಿ ಗ್ಯಾಸ್ ಬುಕ್ಕಿಂಗ್‌ಗೆ ಚಾಲನೆ
.jpg)
ಮೂಡುಬಿದಿರೆ , ಡಿ.27 : ಕೇಂದ್ರ ಸರ್ಕಾರದ ಗ್ರಾಹಕ ಜಾಗೃತಿ ಅಭಿಯಾನಕ್ಕೆ ಪೂರಕವಾಗಿ ಎಚ್‌ಪಿ ಗ್ಯಾಸ್‌ನ ಅಧಿಕೃತ ಡೀಲರ್ ಮೂಡುಬಿದಿರೆಯ ಪದ್ಮಶ್ರೀ ಗ್ಯಾಸ್ ಎಜೆನ್ಸಿಯವರು ಗ್ಯಾಸ್ ಬುಕ್ಕಿಂಗ್‌ಗೆ ನಗದುರಹಿತ ವ್ಯವಸ್ಥೆಯನ್ನು ಅಳವಡಿಸಿದ್ದು, ಈ ಯೋಜನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಕಟೀಲ್ ಅವರು ಪ್ರತಿಯೊಂದು ದೇಶದ ಪ್ರತಿಯೊಂದು ಗ್ರಾಮವು ಸಮಾನತೆಯಿಂದ ಅಭಿವೃದ್ಧಿಯನ್ನು ಹೊಂದಿದರೆ ಜಗತ್ತಿನ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಇದೀಗ ಆರ್ಥಿಕ ಕ್ಷೇತ್ರದಲ್ಲಿ ಪ್ರಧಾನಿಯವರ ಕ್ರಾಂತಿಕಾರಿ ನಡೆಯಿಂದ ಬದಲಾವಣೆಯ ಗಾಳಿ ಬೀಸಿದೆ. ದೇಶದಲ್ಲಿ ಎಲ್ಲಾ ವ್ಯವಹಾರಗಳು ನಗದು ರಹಿತವಾಗಿದೆ ಆರಂಭಗೊಂಡಿದೆ. ಸುಳ್ಯದ ಬಳ್ಪದಂತಹ ತೀರಾ ಹಿಂದುಳಿದ ಗ್ರಾಮದಲ್ಲಿಯೂ ಕ್ಯಾಶ್‌ಲೆಸ್ ಪರಿಕಲ್ಪನೆಯು ಯಶಸ್ವಿಯಾಗಿ ಅಳವಡಿಸಿದ್ದು, ದೇಶದ ಜನರು ಪರಿವರ್ತನೆಯ ಕಡೆಗೆ ಒಗ್ಗುತ್ತಿರುವುದಕ್ಕೆ ನಿದರ್ಶನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಗದುರಹಿತ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಗ್ಯಾಸ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಮೂಡುಬಿದಿರೆಯ ಪದ್ಮಶ್ರೀ ಏಜೆನ್ಸಿಯವರು ಅಂತಹ ವ್ಯವಸ್ಥೆ ಅಳವಡಿಸಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಆ.15ರಿಂದ ರಾಜ್ಯದ ಬಡವರ ಮನೆಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಕೆಲಸವಾಗಲಿದೆ ಎಂದು ಭರವಸೆಯಿತ್ತ ಅವರು ಪ್ರದಾನಿ ಮೋದಿಯವರು ಕಾಳಧನದ ವಿರುದ್ಧ ಮಾಡಿರುವ ಸರ್ಜಿಕಲ್‌ಸ್ಟ್ರೈಕ್‌ನಿಂದಾಗಿ ಕಾಶ್ಮಿರದಲ್ಲಿ ಗಲಭೆ ನಿಯಂತ್ರಣವಾಗಿದೆ. ನಕ್ಸಲರು ಶರಣಾಗಿದ್ದಾರೆ. ಮುಖ್ಯವಾಗಿ ದೇಶದಲ್ಲಿ ಶೇ.50 ಅಪರಾಧಕೃತ್ಯಗಳು ನಿಂತು ಹೋಗಿದೆ ಎಂದು ಹೇಳಿದರು.
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಪದ್ಮಶ್ರೀ ಗ್ಯಾಸ್ ಏಜೆನ್ಸಿಯವರು ಪ್ರಾರಂಭಿಸಿರುವ ಸಂಚಾರಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ತಂತ್ರಜ್ಞಾನದ ಅರಿವು ಜನಸಾಮಾನ್ಯರಿಗೆ ತಲುಪಿಸಿದರೆ ಮಾತ್ರ ನಗದುರಹಿತ ವ್ಯವಸ್ಥೆಯಂತಹ ಯೋಜನೆಗಳು ಯಶಸ್ವಿಯಾಗುತ್ತದೆ. ಆರ್ಥಿಕ ಬಲವರ್ಧನೆಗೆ ಪ್ರದಾನ ಮಂತ್ರಿಯವರ ಆಶಯಕ್ಕೆ ದೇಶದ ಜನತೆ ಸ್ಪಂದಿಸಬೇಕು. ಬಡವರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡುವುದು ಅನಿವಾರ್ಯವಾಗಿದೆ ಎಂದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ, ಎಚ್‌ಪಿಸಿಎಲ್ ಹಿರಿಯ ಮಾರುಕಟ್ಟೆ ಅಧಿಕಾರಿ ನವೀನ್, ಹಿರಿಯ ಮಾರಾಟ ಅಧಿಕಾರಿ ಮಣಿಕಂಠನ್, ಎಚ್‌ಪಿ ಗ್ಯಾಸ್‌ನ ಡೀಲರ್ ಸುಜಯಾ ಎಂ ವೇದಿಕೆಯಲ್ಲಿದ್ದರು.
ಪದ್ಮಶ್ರೀ ಗ್ಯಾಸ್ ಏಜೆನ್ಸಿ ಮಾಲೀಕ ಅಭಿಜಿತ್ ಎಂ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಅಭಿಜಿತ್, ಜಮಾಲುದ್ದೀನ್, ಪ್ರವಿಣ್ ಬಲ್ಲಾಳ್, ದಿವ್ಯಶ್ರೀ ಅತಿಥಿಗಳನ್ನು ಗೌರವಿಸಿದರು. ಅಲ್ಬರ್ಟ್ ಅಲ್ಮೇಡಾ ವಂದಿಸಿದರು.







