ವೆಸ್ಟ್‌ಇಂಡೀಸ್‌ನ ಡಾಟ್ಟಿನ್ ಆಸ್ಪತ್ರೆಗೆ ದಾಖಲು
ಫೀಲ್ಡಿಂಗ್‌ನ ವೇಳೆ ಸಹ ಆಟಗಾರ್ತಿಗೆ ಡಿಕ್ಕಿ

ಮೆಲ್ಬೋರ್ನ್, ಡಿ.27: ವನಿತೆಯರ ಬಿಗ್‌ಬಾಶ್ ಟ್ವೆಂಟಿ-20 ಲೀಗ್‌ನ ವೇಳೆ ಬ್ರಿಸ್ಬೇನ್ ಹೀಟ್ಸ್ ತಂಡದ ಆಟಗಾರ್ತಿ ವಿಂಡೀಸ್‌ನ ಡೆಯೊಂಡ್ರಾ ಡಾಟ್ಟಿನ್ ಕ್ಯಾಚ್ ಪಡೆಯುವಾಗ ಸಹ ಆಟಗಾರ್ತಿ ಲೌರಾ ಹ್ಯಾರಿಸ್‌ಗೆ ಡಿಕ್ಕಿ ಹೊಡೆದು ಮೈದಾನದಲ್ಲಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂದ್ಯದ 11ನೆ ಓವರ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ವೇಗಿ ಹೈಡಿ ಎಸೆತವನ್ನು ಮಿಡ್‌ವಿಕೆಟ್‌ನತ್ತ ಬಾರಿಸಿದರು. ಆಗ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಡಾಟ್ಟಿನ್ ಹಾಗೂ ಹ್ಯಾರಿಸ್ ಕ್ಯಾಚ್ ಪಡೆಯುವ ಭರದಲ್ಲಿ ಪರಸ್ಪರ ಡಿಕ್ಕಿಯಾದರು. ಡಾಟ್ಟಿನ್ ಅವರನ್ನು ಸ್ಟ್ರಚರ್‌ನ ಮೂಲಕ ಮೈದಾನದಿಂದ ಹೊರ ಕರೆದೊಯ್ಯಲಾಯಿತು.
ಆಸ್ಟ್ರೇಲಿಯದ ಕ್ರಿಕೆಟರ್ ಫಿಲಿಪ್ ಹ್ಯೂಸ್ 2014ರ ನ.27ರಂದು ಶೀಫೀಲ್ಡ್ ಟೂರ್ನಿಯ ವೇಳೆ ಬೌನ್ಸರ್ ಎಸೆತವೊಂದು ಕುತ್ತಿಗೆಯ ಹಿಂಭಾಗಕ್ಕೆ ಅಪ್ಪಳಿಸಿದ ಕಾರಣ ಎರಡು ದಿನಗಳ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು.
ಕಳೆದ ವರ್ಷ ಭಾರತದಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿದ್ದ ಹಿರಿಯರ ನಾಕೌಟ್ ಏಕದಿನ ಪಂದ್ಯದಲ್ಲಿ ಬಂಗಾಳದ ಅಂಡರ್-19 ಬ್ಯಾಟ್ಸ್‌ಮನ್ ಅಂಕಿತ್ ಕೇಸರಿ ಎತ್ತರದಿಂದ ಬರುತ್ತಿದ್ದ ಕ್ಯಾಚ್‌ನ್ನು ಪಡೆಯುವ ಯತ್ನದಲ್ಲಿದ್ದಾಗ ಸಹ ಆಟಗಾರ ಸೌರವ್ ಮಂಡಳ್ ಡಿಕ್ಕಿ ಹೊಡೆದಿದ್ದರು. ಪ್ರಜ್ಞೆ ತಪ್ಪಿದ್ದ ಕೇಸರಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರೂ 3 ದಿನಗಳ ಬಳಿಕ ಸಾವನ್ನಪ್ಪಿದ್ದರು.







