ಡಿ.30: ಪೆರ್ಲಂಪಾಡಿಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಪುತ್ತೂರು, ಡಿ.27 : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ 16ನೇ ವರ್ಷದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ.30ರಂದು ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕೌ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಯುವ ಜನತೆ ಪ್ರಗತಿಯೆಡೆಗೆ’ ಎಂಬ ಧ್ಯೇಯ ವಾಕ್ಯದಲ್ಲಿ ನಡೆಯಲಿರುವ ಸಮ್ಮೇಳನದ ಕನ್ನಡ ಭವನೇಶ್ವರಿ ದಿಬ್ಬಣವು ಪೆರ್ಲಂಪಾಡಿ ಮೇಲಿನ ಪೇಟೆಯಿಂದ ಶಾಲಾ ಆವರಣದ ತನಕ ನಡೆಯಲಿದ್ದು, ಕೊಳ್ತಿಗೆ ಗ್ರಾ.ಪಂ. ಅಧ್ಯಕ್ಷೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ತಾ.ಪಂ. ಸದಸ್ಯ ಕೆ. ರಾಮ ಪಾಂಬಾರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಾಷ್ಟ್ರಧ್ವಜಾರೋಹಣ ನಡೆಸಲಿದ್ದಾರೆ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಪರಿಷತ್ ಧ್ವಜಾರೋಹಣ ನಡೆಸಲಿದ್ದಾರೆ. ತಾ.ಪಂ. ಅಧ್ಯಕ್ಷೆ ಸಮ್ಮೇಳನ ಧ್ವಜಾರೋಹಣ ನಡೆಸಲಿದ್ದಾರೆ.
ಬಳಿಕ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಪ್ರೊ. ಹರಿನಾರಾಯಣ ಮಾಡಾವು ಅವರು ವಹಿಸಲಿದ್ದಾರೆ. ಕವಿ ಸುಬ್ರಾಯ ಚೊಕ್ಕಾಡಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ ಅವರ ‘ಭಾವಗೀತೆಗಳು’, ಜೆಸ್ಸಿ ಪಿ.ವಿ ಅವರ ‘ಕವನ ಸಂಕಲನ’. ಕಡಮಜಲು ಸುಭಾಷ್ ರೈ ಅವರ ‘ಬಯಸದೆ ಬಂದ ಭಾಗ್ಯ’, ಶಾಂತಾ ಕುಂಟಿನಿ ಅವರ ‘ಕವನ ಸಂಕಲನ’, ಕೃಷ್ಣರಾಜ ಕೆದಿಲಾಯ ಅವರ ‘ಜ್ಞಾನ ವಿಜ್ಞಾನ ಸಂಪುಟ’, ಶಾರದಾ ಭಟ್ ಕೊಡಂಕಿರಿ ಅವರ ‘ಔಷಧಿ ಪುಸ್ತಕ’, ವಿದ್ಯಾರ್ಥಿ ಕವಿಗೋಷ್ಠಿಯ ಮಕ್ಕಳ ಕವನ ಸಂಗ್ರಹ ‘ಚಿಣ್ಣರ ನಿನಾದ ಕವನ ಸಂಕಲನ’ ಹಾಗೂ ‘ಸಮನ್ವಯ’ ಸ್ಮರಣ ಸಂಚಿಗೆ ಬಿಡುಗಡೆಗೊಳ್ಳಲಿದೆ. ಪ್ರೌಢಶಾಲಾ ವಿಭಾಗ ಮತ್ತು ಕಾಲೇಜು ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧಕರಾದ ವಿದ್ಯಾರ್ಥಿಗಳನ್ನು ಹಾಗೂ 2009ನೆಯ ಸಾಲಿನ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ ಗೌರಿವಸಲಾಗುವುದು ಎಂದರು.
ಸಮ್ಮೇಳನದಲ್ಲಿ ಕವಯಿತ್ರಿ ಭವ್ಯಾ ಹರೀಶ್ ನಿಡ್ಪಳ್ಳಿ, ಕೆ.ಸಿ.ಪಾಟಾಳಿ ಪಡುಮಲೆ, ಜೆಪ್ಸಿ ಪಿ.ವಿ, ಗಣೇಶ್ ಭಟ್ ಮಾಪಲಮಜಲು ಅವರಿಂದ ‘ಕವಿ ಸಮಯ- ಕವಿ ಮನ’ ಕಾರ್ಯಕ್ರಮ ನಡೆಯಲಿದೆ.
ಉಪನ್ಯಾಸಕ ಡಾ. ರೋಹಿಣಾಕ್ಷ ಶಿರ್ಲಾಲು ಅವರಿಂದ ‘ರಾಷ್ಟ್ರ ನಿರ್ಮಾಣ ಯುವ ಜನತೆ’, ಉಪನ್ಯಾಸಕ ಸುಬ್ಬಪ್ಪ ಕೈಕಂಬ ಅವರಿಂದ ‘ಬೆಳ್ಳೆ ರಾಮಚಂದ್ರರಾವ್ ಬದುಕು- ಬರಹ’ ವಿಶೇಷ ಉಪನ್ಯಾಸ ನಡೆಯಲಿದೆ. ಪ್ರೊ. ಎ.ವಿ.ನಾರಾಯಣ ರಾವ್ ಅವರು ಸಿದ್ದಮೂಲೆ ಶಂಕರನಾರಾಯಣ ಭಟ್ ಸಂಸ್ಮರಣಾ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 12 ಮಂದಿ ಸಾಧಕರನ್ನು ಶಿಕ್ಷಣ ತಜ್ಞ ಡಾ. ಎನ್ ಸುಕುಮಾರ ಗೌಡ ಸನ್ಮಾನಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಲಿದ್ದಾರೆ. ಎನ್. ರಘುನಾಥ ರೈ ನುಳಿಯಾಲು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.







