ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ
ಮುಂಬೈ, ಡಿ.27: ಮುಂಬರುವ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳ ಸರಣಿಗೆ ತಂಡ ಆಯ್ಕೆ ಮಾಡುವ ಮೊದಲು ಟೀಮ್ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ಶಿಬಿರವನ್ನು ಏರ್ಪಡಿಸಲು ನಿರ್ಧರಿಸಿದ್ದಾರೆ.
ತರಬೇತಿ ಶಿಬಿರ ಕೊನೆಗೊಂಡ ಬಳಿಕ ಜನವರಿ ಮೊದಲ ವಾರದಲ್ಲಿ ಸೀಮಿತ ಓವರ್ ಕ್ರಿಕೆಟ್‌ಗೆ ಭಾರತೀಯ ತಂಡ ಆಯ್ಕೆ ಮಾಡುವ ಸಾಧ್ಯತೆಯಿದೆ.
ಮುಖ್ಯ ಆಟಗಾರರಾದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ವೇಗದ ಬೌಲರ್ ಮುಹಮ್ಮದ್ ಶಮಿ ಹಾಗೂ ಆಲ್‌ರೌಂಡರ್ ಜಯಂತ್ ಯಾದವ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಈಗಾಗಲೇ ಹೊರ ನಡೆದಿದ್ದಾರೆ.
ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಸ್ಪಿನ್ನರ್ ಅಕ್ಷರ್ ಪಟೇಲ್ ಬೆರಳಿನ ಗಾಯದಿಂದಾಗಿ ಆಯ್ಕೆ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯ ನಡುವೆ ದೀರ್ಘ ಅಂತರವಿರುವ ಕಾರಣ ಟೂರ್ನಿಯ ಮೊದಲು ತರಬೇತಿ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ. ತರಬೇತಿ ಶಿಬಿರ ಆಟಗಾರರಿಗೆ ಫಿಟ್‌ನೆಸ್ ವಾಪಸು ಪಡೆಯಲು ಸಹಕಾರಿಯಾಗಲಿದೆ.
ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಹಾನೆ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ







