ಚುನಾವಣೆಗೆ ಸ್ಪರ್ಧಿಸಿದ್ದ ರೆ ಮತ್ತೆ ಗೆಲ್ಲುತ್ತಿದ್ದೆ: ಒಬಾಮ
ವಾಶಿಂಗ್ಟನ್,ಡಿ.27: ಕಳೆದ ತಿಂಗಳು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದರೂ, ದೇಶವು ಈಗಲೂ ತನ್ನ ರಾಜಕೀಯ ದೃಷ್ಟಿಕೋನದ ಬಗ್ಗೆ ಒಲವು ಹೊಂದಿದೆಯೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಒಂದು ವೇಳೆ ತಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಲ್ಲಿ ಮೂರನೆ ಬಾರಿ ಆಯ್ಕೆಯಾಗುತ್ತಿದ್ದೆಯೆಂದವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎನ್‌ಎನ್ ಸುದ್ದಿವಾಹಿನಿ ಹಾಗೂ ಚಿಕಾಗೋ ವಿಶ್ವವಿದ್ಯಾನಿಲಯ ಪ್ರಾಯೋಜಿತ ‘ದಿ ಆ್ಯಕ್ಸ್ ಫೈಲ್ಸ್’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಅಮೆರಿಕದ ಜನತೆ ಈಗಲೂ ತನ್ನ ಪ್ರಗತಿಪರ ನಿಲುವನ್ನು ಬೆಂಬಲಿಸುತ್ತಿದ್ದಾರೆಂದು ಹೇಳಿದರು. ‘‘ ಈ ಪ್ರಗತಿಪರ ದೃಷ್ಟಿಕೋನದ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಒಂದು ವೇಳೆ ನಾನು ಚುನಾವಣೆಗೆ ಸ್ಪರ್ಧಿಸಿದ್ದಲ್ಲಿ ಅಮೆರಿಕದ ಜನತೆ ನನ್ನ ಪರ ವಹಿಸುವಂತೆ ಮಾಡುತ್ತಿದ್ದೆ ಎಂದರು. ಅಮೆರಿಕದ ಅಧ್ಯಕ್ಷರಾಗಿ ದ್ವಿತೀಯ ಹಾಗೂ ಅಂತಿಮ ಸಲದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಒಬಾಮಾ, ಮುಂದಿನ ಮೂರು ವಾರಗಳಲ್ಲಿ ಹುದ್ದೆಯಿಂದ ನಿರ್ಗಮಿಸಲಿದ್ದಾರೆ.
ಅಮೆರಿಕದ ಅಧ್ಯಕ್ಷರು ಎರಡನೆ ಅವಧಿಗೆ ಮಾತ್ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ‘‘ನನ್ನ ಅಧಿಕಾರದ ಎರಡು ಅವಧಿಗಳಲ್ಲಿ ಅಮೆರಿಕ ಸಾಧಿಸಿರುವ ಪ್ರಗತಿಯ ಬಗ್ಗೆ ನನಗೆ ಹೆಮ್ಮೆಯಿದೆ. ಇದಕ್ಕಾಗಿ ಅಮೆರಿಕದ ಜನತೆಯನ್ನು ಅದರಲ್ಲೂ ಹುಮ್ಮಸ್ಸಿನಿಂದ ಕೂಡಿದ ಯುವಜನಾಂಗವನ್ನು ಅಭಿನಂದಿಸುತ್ತೇನೆ.’’ಎಂದವರು ಸಂದರ್ಶನದಲ್ಲಿ ಹೇಳಿದ್ದಾರೆ.
ದೇಶದ ಯುವಜನಾಂಗವು ಚುರುಕುತನ ಹಾಗೂ ಸಂಶೋಧನಾಶೀಲತೆಯನ್ನು ಹೊಂದಿದೆ. ಅದು ಹೆಚ್ಚು ಸೃಜನಶೀಲತೆ ಹಾಗೂ ಉದ್ಯಮ ಶೀಲತೆಯಿಂದ ಕೂಡಿದೆಯೆಂದು ಒಬಾಮ ಶ್ಲಾಘಿಸಿದರು.







