ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆ: ತೆವಾನ್ ಆತಂಕ
ತೈಪೆ,ಡಿ.27: ತನಗೆ ಚೀನಾದ ಬೆದರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೆಂದು ತೈವಾನ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.ಚೀನಾದ ವಿಮಾನವಾಹಕ ಹಡಗು ಹಾಗೂ ಇತರ ಯುದ್ಧನೌಕೆಗಳು ದೇಶದ ದಕ್ಷಿಣ ಭಾಗದ ಸಮುದ್ರಪ್ರದೇಶದಲ್ಲಿ ಹಾದುಹೋದ ಎರಡು ದಿನಗಳ ಬಳಿಕ ತೈವಾನ್ ಈ ಭೀತಿಯನ್ನು ವ್ಯಕ್ತಪಡಿಸಿದೆ. ಚೀನಾವು ತನಗೆ ಸೇರಿದ್ದೆಂದು ವಾದಿಸುತ್ತಿರುವ ದಕ್ಷಿಣ ಚೀನಾ ಸಮುದ್ರದಲ್ಲಿರುವ ತೈವಾನ್‌ನ ನಿಯಂತ್ರಣದಲ್ಲಿರುವ ಡೊಂಗ್‌ಶಾ ದ್ವೀಪವನ್ನು ಚೀನಾದ ಐದು ಯುದ್ಧನೌಕೆಗಳು ಹಾದುಹೋಗಿರುವುದಾಗಿ ತೈವಾನ್ ರಕ್ಷಣಾ ಸಚಿವಾಲಯವು ಹೇಳಿಕೊಂಡಿದೆ. ತೈವಾನ್ ಹಾಗೂ ಅಮೆರಿಕ ಜೊತೆಗಿನ ಬಾಂಧವ್ಯವು ಹಳಸಿರುವ ಹಿನ್ನೆಲೆಯಲ್ಲಿ ತನ್ನ ಬಲಪರೀಕ್ಷೆಯ ಸಂಕೇತವಾಗಿ ಚೀನಾವು ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಕವಾಯತನ್ನು ನಡೆಸಿತ್ತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಚೀನಾ ನಡೆಸಿದ ಎರಡನೆ ಸೇನಾ ಕವಾಯತು ಇದಾಗಿದೆ. ‘‘ಚೀನಾದ ಸಮರಾಭ್ಯಾಸದ ಸಮಯವು ಕಾಕತಾಳೀಯವಾಗಿರಬಹುದು. ಆದರೆ ದ್ವೀಪರಾಷ್ಟ್ರವಾದ ತೈವಾನ್ ಈಗಲೂ ಸೇನಾ ಬೆದರಿಕೆಯನ್ನು ಎದುರಿಸುತ್ತಿದೆ’’ ಎಂದು ತೈವಾನ್ ರಕ್ಷಣಾ ಸಚಿವ ಫೆಂಗ್ ಶಿ ಕುವಾನ್ ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ರಾಷ್ಟ್ರರಕ್ಷಣೆಗಾಗಿ ಸೇನೆಯನ್ನು ಸೇರುವಂತೆ ಯುವಜನತೆಗೆ ಕರೆ ನೀಡಿದ್ದಾರೆ.





