ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ‘ಸೀಟಿವಾಲೆ ಬಾಬಾ’ ಬಂಧನ

ಮುಂಬೈ, ಡಿ.28: 'ಸೀಟಿವಾಲೆ ಬಾಬಾ' ಎಂಬ ಅಡ್ಡ ಹೆಸರು ಪಡೆದಿದ್ದ ಸ್ವಯಂಘೋಷಿತ 60 ವರ್ಷದ ದೇವಮಾನವನೊಬ್ಬನನ್ನು ಇಲ್ಲಿನ ಮನ್ಖುರ್ಡ್ ಎಂಬಲ್ಲಿನ ದರ್ಗಾದ ಸಮೀಪ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗುಲಾಂ ಮುಹಮ್ಮದ್ ರಫೀಖ್ ಶೇಖ್ ಕಳೆದ ಮೂರು ತಿಂಗಳುಗಳಿಗಿಂತ ಹೆಚ್ಚಿನ ಸಮಯದಿಂದ ತಲೆಮರೆಸಿಕೊಂಡಿದ್ದ.
ಬೈಂಗನ್ವಾಡಿಯ ಶಿವಾಜಿನಗರ ನಿವಾಸಿಯಾದ ಈತಕರ್ಬಾಲ ಮೈದಾನದ ಸಮೀಪವಿರುವ ದರ್ಗಾದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದು, ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುತ್ತಿದ್ದ. ಕಂಪೌಂಡ್ ಸುತ್ತಲೂ ಆತ ಸೀಟಿ ಊದಿಕೊಂಡು ಅತ್ತಿತ್ತ ಹೋಗುತ್ತಿದ್ದುದರಿಂದ ಆತನಿಗೆ 'ಸೀಟಿವಾಲೆ ಬಾಬಾ' ಎಂಬ ಅಡ್ಡ ಹೆಸರು ಬಂದಿತ್ತು.
ಪೊಲೀಸರ ಪ್ರಕಾರ ಸೆಪ್ಟೆಂಬರ್ 6ರ ಸಂಜೆ ಸುಮಾರು 6:30ರ ಹೊತ್ತಿಗೆ ಕರ್ಬಾಲ ಮೈದಾನದ ಸುತ್ತ ಆಡಿಕೊಂಡಿದ್ದ ಬಾಲಕಿ 7:30ರ ಹೊತ್ತಿಗೆ ದರ್ಗಾದಿಂದ ಮನೆಗೆ ಕಾಣಿಕೆಗಳನ್ನು ಕೊಂಡು ಹೋಗಲು ಆಗಮಿಸಿದ್ದಳು. ಆಗ ಅಲ್ಲಿದ್ದ ಆರೋಪಿ ಆಕೆಯನ್ನು ದರ್ಗಾದ ಹಿಂದಿರುವ ಕತ್ತಲೆಯ ಜಾಗಕ್ಕೆ ಕರೆದುಕೊಂಡು ಹೋಗಿ ತನ್ನ ಮಡಿಲಲ್ಲಿ ಕೂರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಸಮೀಪದ ಕೆಲವರು ಇದನ್ನು ಗಮನಿಸಿದ್ದು ಇದನ್ನು ತಿಳಿದ ಕೂಡಲೇ ಆರೋಪಿ ತನಗೆ ಹೊಡೆತಗಳು ಬೀಳುವುದೆಂಬ ಭಯದಿಂದ ಅಲ್ಲಿಂದ ಓಡಿ ಹೋಗಿದ್ದನು.
ಮನೆಗೆ ಹಿಂದಿರುಗಿದ ಸಂತ್ರಸ್ತೆ ಏನನ್ನೂ ಹೇಳದೇ ಇದ್ದರೂ ಸ್ಥಳೀಯರು ಆಕೆಯ ತಾಯಿಗೆ ವಿಷಯ ತಿಳಿಸಿದಾಗಲಷ್ಟೇ ಬಾಲಕಿ ಬಾಯ್ಬಿಟ್ಟಿದ್ದಳು. ನಂತರ ಪೊಲೀಸ್ ದೂರು ದಾಖಲಿಸಲಾಗಿತ್ತು.
ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಇತ್ತೀಚೆಗೆ ಶಿವಾಜಿ ನಗರದಲ್ಲಿರುವ ತನ್ನ ಪುತ್ರನ ಹೊಸ ಮನೆಗೆ ಬಂದಾಗ ಅದರ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದರು.







