ಹಳೆ ನೋಟು ಸ್ವೀಕರಿಸಲು ಕಟ್ಟಡ ಕಾರ್ಮಿಕರಿಂದ ನಿರಾಕರಣೆ: ಬಿಲ್ಡರ್ ವಿರುದ್ಧ ದೂರು

ಗ್ರೇಟರ್ ನೊಯ್ಡ, ಡಿ.28: ಅಮಾನ್ಯಗೊಂಡ ಹಳೆ ನೋಟುಗಳನ್ನು ಸಂಬಳದ ರೂಪದಲ್ಲಿ ಸ್ವೀಕರಿಸಲು ನಿರಾಕರಿಸಿದ ಕಟ್ಟಡ ಕಾರ್ಮಿಕರು, ತಮ್ಮ ಮೇಲೆ ಒತ್ತಡ ಹೇರುತ್ತಿರುವ ಬಿಲ್ಡರ್ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಟ್ಟಡ ಕಾರ್ಮಿಕರ ದೂರಿನ ಮೇರೆಗೆ ಬಿಲ್ಡರ್‌ರನ್ನು ವಿಚಾರಣೆ ನಡೆಸಲಾಗಿದೆ. ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಚೆಕ್‌ನ ಮೂಲಕವೇ ಕಾರ್ಮಿಕರಿಗೆ ಸಂಬಳ ನೀಡಲು ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಡಿಎಸ್‌ಪಿ ಅರವಿಂದ್ ಯಾದವ್ ತಿಳಿಸಿದ್ದಾರೆ.
ಸಂಬಳ ನೀಡದೆ ಸತಾಯಿಸುತ್ತಿರುವ ಬಿಲ್ಡರ್‌ನ ವಿರುದ್ಧ ಆತನ ಕಚೇರಿಯ ಹೊರಗೆ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದ್ದಾರೆ.
‘‘ಬಿಲ್ಡರ್ ಅಕ್ಟೋಬರ್‌ನ ಸಂಬಳವನ್ನು ಹಳೆ ನೋಟಿನಲ್ಲಿ ನೀಡಿದ್ದರು. ಅದನ್ನು ಕಾರ್ಮಿಕರು ಸ್ವೀಕರಿಸಿದ್ದರು. ಈ ಬಾರಿ ಬಿಲ್ಡರ್ ನವೆಂಬರ್ ತಿಂಗಳ ಸಂಬಳ ಜೊತೆಗೆ ಡಿಸೆಂಬರ್ ತಿಂಗಳ ಸಂಬಳವನ್ನು ಮುಂಗಡವಾಗಿ ಹಳೆ ನೋಟುಗಳನ್ನು ಸ್ವೀಕರಿಸಬೇಕೆಂದು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಸಂಬಳವೇ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಮಿಕ ಶೇಷ ಕುಮಾರ್ ಹೇಳಿದ್ದಾರೆ.







