ವಿದೇಶಿ ವ್ಯಕ್ತಿಯ ಮೃತದೇಹವನ್ನು ತಿಂದು ಹಾಕಿದ ಬೀದಿ ನಾಯಿಗಳು

ಪಾಟ್ನಾ, ಡಿ.28: ಬಿಹಾರದ ಆಸ್ಪತ್ರೆಯೊಂದರ ಪೋಸ್ಟ್ ಮಾರ್ಟಂ ಕೊಠಡಿಯ ಹೊರಗೆ ಇರಿಸಲಾಗಿದ್ದ ಅಪಘಾತವೊಂದರಲ್ಲಿ ಮೃತಪಟ್ಟ ವಿದೇಶಿ ಮಹಿಳೆಯೊಬ್ಬಳ ಮೃತದೇಹವನ್ನು ಬೀದಿನಾಯಿಗಳು ತಿಂದು ಹಾಕಿದ ಘಟನೆ ಮಂಗಳವಾರ ವರದಿಯಾಗಿದೆ. ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಮೃತ ಮಹಿಳೆ 53 ವರ್ಷದ ಪೆಮಾ ಚೋಡೆನ್ ಭೂತಾನ್ ನಾಗರಿಕಳಾಗಿದ್ದು, ಬೇಗುಸರಾಯ್ ನಗರದಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಢಿಕ್ಕಿಯಾಗಿ ಆಕೆ ಸೋಮವಾರ ಸಾವನ್ನಪ್ಪಿದ್ದಳು. ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಅವರ ಕಾಲಚಕ್ರ ಪೂಜೆಯಲ್ಲಿ ಭಾಗವಹಿಸುವ ಸಲುವಾಗಿ ಗಯಾ ಜಿಲ್ಲೆಯ ಬೋಧ್ ಗಯಾಗೆ ಆಕೆ ಬೌದ್ಧ ಲಾಮಾ ಒಬ್ಬರೊಂದಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ದಾರಿಮಧ್ಯೆ ಆಕೆ ಬೇಗುಸರಾಯ್ ನಲ್ಲಿ ತಿಂಡಿ ತಿನ್ನಲು ಇಳಿದು ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಆಕೆಯ ಮೃತದೇಹವನ್ನು ಬೀದಿ ನಾಯಿಗಳು ತಿಂದು ಹಾಕಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಈ ಬಗ್ಗೆ 48 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಸರ್ಜನ್ ಹರಿನಾರಾಯಣ್ ಸಿಂಗ್ ಅವರಿಗೆ ಆದೇಶಿಸಿದ್ದಾರೆ.
ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸುವ ಬದಲು ಅದನ್ನು ಪೋಸ್ಟ್ ಮಾರ್ಟಂ ಕೊಠಡಿಯ ಹೊರಗೆ ಇರಿಸಿ ಹೋಗಿದ್ದರೆಂದು ಸಿಂಗ್ ಆರೋಪಿಸಿದರೆ, ಈ ಘಟನೆಗೆ ಆಸ್ಪತ್ರೆಯೇ ಕಾರಣವೆಂದು ಬೇಗುಸರಾಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಮಿಶ್ರಾ ಹೇಳಿದ್ದಾರೆ.







