ಪ್ರಧಾನಿ ಮೋದಿ ನೋಟ್ ಬ್ಯಾನ್ ‘ಯಜ್ಞ'ಕ್ಕೆ ಶ್ರೀಸಾಮಾನ್ಯರು ಬಲಿ
ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ, ಡಿ.28: ನೋಟು ನಿಷೇಧದ ವಿಷಯಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿಯವರ ‘ಯಾಗ’ಕ್ಕೆ ಬಡವರು ಬಲಿಪಶುವಾಗಿದ್ದು, ಶ್ರೀಮಂತರಿಗೆ ಲಾಭವಾಗಿದೆ ಎಂದು ಹೇಳಿದ್ದಾರೆ.
‘‘ತಾನು ಕಪ್ಪು ಹಣ ಹಾಗೂ ಭ್ರಷ್ಟಾಚಾರ ವಿರುದ್ಧ ಯಜ್ಞ ಮಾಡುತ್ತಿರುವೆ ಎಂದು ನ.8 ರಂದು ಪಿಎಂ ಮೋದಿ ಹೇಳಿಕೆ ನೀಡಿದ್ದರು. ಆದರೆ, ಈ ಯಜ್ಞ ದೇಶದಲ್ಲಿ ಶೇ.1ರಷ್ಟಿರುವ ಅಗರ್ಭ ಶ್ರೀಮಂತರಿಗೆ ಮಾಡಲಾಗಿದ್ದು, ರೈತರು, ಕಾರ್ಮಿಕರು ಹಾಗೂ ಶ್ರೀಸಾಮಾನ್ಯರು ಮೋದಿಜಿಯ ‘ಯಜ್ಞ'ಕ್ಕೆ ಬಲಿಪಶುವಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನ 132ನೆ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಬುಧವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್,‘‘ಭ್ರಷ್ಟಾಚಾರ ವಿರುದ್ಧ ನೋಟು ನಿಷೇಧ ಕ್ರಮಕೈಗೊಳ್ಳಲಾಗಿದೆ ಎಂದು ಮೋದಿ ಹೇಳುತ್ತಾರೆ. ಆದರೆ, ನಾವು(ಕಾಂಗ್ರೆಸ್) ಅವರು ಎದುರಿಸುತ್ತಿರುವ ಭ್ರಷ್ಟಾಚಾರ ಪ್ರಕರಣವನ್ನು ಬಿಚ್ಚಿಟ್ಟಿದ್ದೇವೆ. ಆದಾಯ ತೆರಿಗೆ ಇಲಾಖೆ ಸಹಾರ ಗ್ರೂಪ್‌ನಿಂದ ಹಲವು ದಾಖಲೆ ವಶಪಡಿಸಿಕೊಂಡಿದ್ದು, ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಕಾರ್ಪೋರೇಟ್‌ರಿಂದ ಕಿಕ್‌ಬ್ಯಾಕ್ ಪಡೆದಿರುವ ಬಗ್ಗೆ ಉತ್ತರ ನೀಡಬೇಕು. ಇದು ದೇಶದ ಜನರ ಬೇಡಿಕೆಯಾಗಿದೆ’’ ಎಂದು ಹೇಳಿದ್ದಾರೆ.







