ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ 'ನೊಬೆಲ್ ಪುರಸ್ಕೃತ'!

ಕೊಲ್ಕತ್ತಾ,ಡಿ.28; ನೊಬೆಲ್ ಪುರಸ್ಕೃತರೊಬ್ಬರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಎಂದಾದರೂ ಕೇಳಿದ್ದೀರಾ?
ನಾರ್ತ್ ಪರಗಣಾಸ್ ಜಿಲ್ಲೆಯ ಪಿನಾಕಿ ರಂಜನ್ ಭಾರತಿ ವಸ್ತುಶಃ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡು ಆಯ್ಕೆಯಾಗುವ ವಿಶ್ವಾಸ ಹೊಂದಿದ್ದಾರೆ. ಇದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ!
ಭಾರತಿ (66) ದ ರಿಲಿಜನ್ ಆಫ್ ಮ್ಯಾನ್ ರಿವಾಲ್ವಿಂಗ್ ಪೊಲಿಟಿಕಲ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷದ ಸಂಸ್ಥಾಪಕ ಅಧ್ಯಕ್ಷ. ಪಶ್ಚಿಮ ಬಂಗಾಳದಲ್ಲಿ ಮಾನ್ಯತೆ ಪಡೆಯದ ಆದರೆ ನೊಂದಾಯಿತ 31 ಪಕ್ಷಗಳ ಪೈಕಿ ಇದೂ ಒಂದು. 2005ರಿಂದ 2015ರ ಅವಧಿಯಲ್ಲಿ ಯಾವ ಚುನಾವಣೆಯಲ್ಲೂ ಸ್ಪರ್ಧಿಸದ ನೊಂದಾಯಿತ ಪಕ್ಷಗಳ ನೊಂದಣಿಯನ್ನು ಚುನಾವಣಾ ಆಯೋಗ ರದ್ದುಪಡಿಸಿದೆ. ಆದರೆ 2006ರಿಂದೀಚೆಗೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಾ ಬಂದ ಭಾರತಿ ಪಕ್ಷಕ್ಕೆ ಈ ತೂಗುಗತ್ತಿ ಇಲ್ಲ.
30 ಸೆಕೆಂಡ್ ಅವಧಿಯ 2016ರ ಅವರ ಚುನಾವಣಾ ಪ್ರಚಾರ, ಅವರನ್ನು ನೊಬೆಲ್ ಪುರಸ್ಕೃತ ಎಂದೇ ಪರಿಚಯಿಸುತ್ತದೆ. "ನಾನು ಈಗ ನೊಬೆಲ್ ಪುರಸ್ಕೃತ. ಬಹಳಷ್ಟು ಹಿಂದೆಯೇ ಅಂದರೆ 2008ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ನಾಮನಿರ್ದೇಶನಗೊಂಡಿದ್ದೆ. ನಾನು ಈ ಗೌರವದ ನಿರೀಕ್ಷೆಯಲ್ಲಿದ್ದೇನೆ" ಎಂದು ದೂರವಾಣಿ ಮೂಲಕ ಮಾತನಾಡಿದ ಅವರು ಹೇಳಿದರು.
ಇವರ 2011ರ ಚುನಾವಣಾ ಅಫಿಡವಿಟ್‌ನಲ್ಲಿ ನೊಬೆಲ್‌ಗೆ ನಾಮನಿರ್ದೇಶನಗೊಂಡಿರುವ ಅಂಶದ ಉಲ್ಲೇಖವಿದ್ದರೆ, 2014ರ ಅಫಿಡವಿಟ್‌ನಲ್ಲಿ ಈ ಗೌರವಕ್ಕೆ ಆಯ್ಕೆಯಾಗಿರುವುದಾಗಿ ಹೇಳಲಾಗಿದೆ. ಈ ಪಕ್ಷದ ಕಚೇರಿ ವಿಳಾಸ: ಕವಿತನಗರ, ಪಿಓ+ಪಿಎಸ್ ಬೊಂಗಾನ್, 743235 ಎಂದಿದೆ. ಆದರೆ ಭಾರತ- ಬಾಂಗ್ಲಾ ಗಡಿಯ ಈ ಜಿಲ್ಲೆಯಲ್ಲಿ ಆ ಹೆಸರಿನ ಜಾಗವೇ ಇಲ್ಲ. ಅಫಿಡವಿಟ್‌ನಲ್ಲಿ ನಮೂದಿಸಿರುವ ದೂರವಾಣಿ ಸಂಖ್ಯೆಗಳೂ ಈಗ ಅವರದ್ದಲ್ಲ. ಈತ ಸುಭಾಶ್‌ನಗರದಲ್ಲಿ ವಾಸವಿದ್ದು, ಈ ಪ್ರದೇಶಕ್ಕೆ ಕವಿತಾನಗರ ಎಂದು ಹೆಸರಿಸಿಕೊಂಡಿದ್ದಾರೆ.
ಅಂಚೆ ಕಚೇರಿ ಸಿಬ್ಬಂದಿಯಿಂದ ಹಿಡಿದು ಸ್ಥಳೀಯ ಟಿಎಂಸಿ ಶಾಸಕ ವಿಶ್ವಜೀತ್‌ದಾಸ್‌ವರೆಗೆ ಯಾರಿಗೂ ಕವಿತಾನಗರ ಬಗ್ಗೆ ಮಾಹಿತಿ ಇಲ್ಲ. ಕವಿತೀರ್ಥ ಎನ್ನುವುದು ಶಿಥಿಲಾವಸ್ಥೆಯ, ಪ್ರಾಥಮಿಕ ಶಾಲೆಯನ್ನು ಹೋಲುವ ಕಟ್ಟಡವಾಗಿದ್ದು, ಇದನ್ನು ಸಂಗೀತ ಹಾಗೂ ಕಲೆಯ ಮಹಾವಿದ್ಯಾಲಯವಾಗಿ ರೂಪಿಸುವುದು ಅವರ ಕನಸು. ಅವರೇ ಅದಕ್ಕೆ ಪ್ರಾಚಾರ್ಯರು. ಇದಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಇದೇ ಅವರ ಪಕ್ಷದ ಕಚೇರಿ. ಭಾರತಿ ತಮ್ಮನ್ನು ಮಹಾನಾಮ ಹಾಗೂ ನೊಬೆಲ್ ಪುರಸ್ಕೃತ ಎಂದು ಬ್ಯಾನರ್‌ನಲ್ಲಿ ಹೇಳಿಕೊಂಡಿದ್ದಾರೆ.
2006ರ ವಿಧಾನಸಭಾ ಚುನಾವಣೆಯಲ್ಲಿ ಬೋಲಪುರ ಮತ್ತು ಬೋನ್‌ಗಾಂವ್ ಕ್ಷೇತ್ರದಿಂದ ಭಾರತಿ ಸ್ಪರ್ಧಿಸಿ, ಕ್ರಮವಾಗಿ 1190 ಹಾಗೂ 1565 ಮತ ಪಡೆದಿದ್ದರು. 2016ರ ಚುನಾವಣೆಯಲ್ಲಿ ಬೋನ್‌ಗಾಂವ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ 537 ಮತ ಪಡೆದಿದ್ದರು.
ತಮ್ಮ ಪಕ್ಷವಷ್ಟೇ, ವಿಶ್ವದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಟಾಗೋರ್ ನಮ್ಮ ಸ್ಫೂರ್ತಿ. ಮಾನವಧರ್ಮವೇ ಶ್ರೇಷ್ಠ ಧರ್ಮ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವವನ್ನು ಆಳುವ ಪಕ್ಷವಾಗಿ ನಮ್ಮ ಪಕ್ಷ ಬೆಳೆಯುತ್ತದೆ ಎಂದು ಅವರು ಹೇಳುತ್ತಾರೆ!







