ಪುತ್ರ ಆಝಾದ್‌ನೊಂದಿಗೆ ಆಮಿರ್ ಖಾನ್ ‘ದಂಗಲ್’

ಹೊಸದಿಲ್ಲಿ, ಡಿ.28: ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಕುಸ್ತಿ ಪಟುಗಳ ಜೀವನ ಆಧರಿತ ಚಿತ್ರ ‘ದಂಗಲ್‘ ಇತಿಹಾಸ ನಿರ್ಮಿಸಿದ್ದು, ಬಾಕ್ಸಾಫೀಸ್‌ನಲ್ಲಿ ಭಾರೀ ಹಣ ಮಾಡುತ್ತಿದೆ. ಚಿತ್ರ ಯಶಸ್ಸು ಸಾಧಿಸಿದ್ದರೂ ಈ ಚಿತ್ರದ ಪ್ರೊಮೊಶನ್ ಮಾತ್ರ ಇನ್ನೂ ನಿಂತಿಲ್ಲ.
‘ದಂಗಲ್’ ಚಿತ್ರಕ್ಕೆ ಸ್ಫೂರ್ತಿಯಾಗಿರುವ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಹರ್ಯಾಣದ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗತ್ ಅವರು ಚಿತ್ರದ ಹೀರೋ ಆಮಿರ್‌ಖಾನ್‌ರ ತೆರೆಯ ಹಿಂದಿನ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಫೋಗತ್ ಬಿಡುಗಡೆ ಮಾಡಿರುವ ಕೆಲವೇ ಸೆಕೆಂಡ್‌ಗಳ ವಿಡಿಯೋದಲ್ಲಿ 51ರ ಪ್ರಾಯದ ಆಮಿರ್ ಅವರು ತಮ್ಮ ಪುತ್ರ ಐದರ ಪೋರ ಆಝಾದ್‌ರೊಂದಿಗೆ ಕುಸ್ತಿ ಅಭ್ಯಾಸ ಮಾಡುತ್ತಿರುವ ದೃಶ್ಯ ಮನಮೋಹಕವಾಗಿದೆ. ಚಿತ್ರಕ್ಕಾಗಿ ದೀರ್ಘ ಸಮಯ ಕುಸ್ತಿ ಅಭ್ಯಾಸ ಮಾಡಿರುವ ಆಮಿರ್‌ಖಾನ್ ತನ್ನ ಪುತ್ರನಿಗೂ ಕುಸ್ತಿಯನ್ನು ಕಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಆಮಿರ್ ಖಾನ್ 2005ರಲ್ಲಿ ಚಿತ್ರ ನಿರ್ಮಾಪಕಿ ಕಿರಣ್ ರಾವ್‌ರನ್ನು ವಿವಾಹವಾಗಿದ್ದರು. ಈ ದಂಪತಿಗೆ 2011ರಲ್ಲಿ ಆಝಾದ್ ಎಂಬ ಗಂಡು ಮಗು ಜನಿಸಿದೆ. ಆಮಿರ್ ಮೊದಲ ಪತ್ನಿ ರೀನಾ ದತ್ತಾಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಡಿ.23 ರಂದು ಬಿಡುಗಡೆಯಾಗಿರುವ ‘ದಂಗಲ್’ ಚಿತ್ರದಲ್ಲಿ ಆಮಿರ್ ಖಾನ್ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗತ್ ಪಾತ್ರ ನಿರ್ವಹಿಸಿದ್ದಾರೆ. ಆಮಿರ್ ನಟನೆಯ ‘ದಂಗಲ್’ ಚಿತ್ರ ಸೋಮವಾರದ ತನಕ 132.23 ಕೋಟಿ ರೂ. ಸಂಗ್ರಹಿಸಿದೆ. ರವಿವಾರವೊಂದರಲ್ಲೆ 42.35 ಕೋಟಿ ರೂ. ಸಂಗ್ರಹವಾಗಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ.







