‘‘ಮೊಯ್ಲಿ, ಡಿವಿ ತಾಕತ್ತಿದ್ದರೆ ಉಪ್ಪಿನಂಗಡಿ ಜನರನ್ನು ಭೇಟಿ ಮಾಡಲಿ’’
ಎತ್ತಿನಹೊಳೆ ಯೋಜನೆ ವಿಚಾರ

ಮಂಗಳೂರು, ಡಿ.28: ‘‘ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದರೆ ಕರಾವಳಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ ಹಾಗೂ ಡಿ.ವಿ.ಸದಾನಂದ ಗೌಡ ಅವರು ಎತ್ತಿನಹೊಳೆ ಯೋಜನೆಗೆ ಬೆಂಬಲವಾಗಿ ನಿಂತಿದ್ದಾರೆ. ತಾಕತ್ತಿದ್ದರೆ ಅವರಿಬ್ಬರು ಉಪ್ಪಿನಂಗಡಿ ಜನತೆಯನ್ನು ಭೇಟಿಯಾಗಿ ಈ ಯೋಜನೆ ಕುರಿತಂತೆ ಮಾತುಕತೆ ನಡೆಸಲಿ..’’ ಹೀಗೆಂದು ಸವಾಲೆಸೆದಿದ್ದಾರೆ ಕೇಂದ್ರ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ.
ಮಂಗಳೂರಿನಲ್ಲಿಂದು ಮತ್ತೆ ಸುದ್ದಿಗೋಷ್ಠಿಯನ್ನು ಕರೆದು ಮಾತನಾಡಿದ ಅವರು, ಸದಾನಂದ ಗೌಡ ಅವರು ಎತ್ತಿನಹೊಳೆ ಯೋಜನೆಗೆ ಪೂರಕವಾಗಿ ಮಾತನಾಡುತ್ತಿದ್ದು, 2000 ಟಿಎಂಸಿ ನೀರು ಸಮುದ್ರಕ್ಕ್ಕೆ ಪೋಲಾಗುತ್ತಿದೆ. ಇದರ ಸದುಪಯೋಗ ಎಂದಿದ್ದಾರೆ. ಆದರೆ ಅವರು ಪೋಲಾಗುತ್ತಿರುವ ಈ ನೀರಿನ ಪ್ರಮಾಣವನ್ನು ಎಲ್ಲಿ ನಿಂತು ಅಳತೆ ಮಾಡಿದ್ದು ಎಂದು ಪೂಜಾರಿ ಪ್ರಶ್ನಿಸಿದ್ದಾರೆ.
ಮತ್ತೋರ್ವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಎತ್ತಿನಹೊಳೆ ಅನುಷ್ಠಾನ ಮಾಡುತ್ತೇವೆ ಎಂದಿದ್ದಾರೆ. ಇವರಿಬ್ಬರನ್ನು ಕರಾವಳಿಯ ಇತಿಹಾಸ ಕ್ಷಮಿಸುವುದಿಲ್ಲ ಎಂದು ಅವರು ಕಿಡಿಕಾರಿದರು.
ನೋಟು ಅಮಾನ್ಯ ಕ್ರಮದ ವಿರುದ್ಧ ಮಾತನಾಡಿದ ಪೂಜಾರಿ, ಇಷ್ಟೊಂದು ದೊಡ್ಡ ಯೋಜನೆ ಜಾರಿಗೊಳಿಸುವ ಸಂದರ್ಭ ಸೂಕ್ತ ಪೂರ್ವಸಿದ್ಧತೆ ಕೈಗೊಳ್ಳದೆ ಬುದ್ಧಿಯನ್ನು ಎಲ್ಲಿ ಅಡವಿಟ್ಟು ಬಿಟ್ಟಿದ್ದೀರಿ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು. ಪ್ರಪಂಚದಲ್ಲಿ ಎಲ್ಲೂ ಕ್ಯಾಶ್‌ಲೆಸ್ ಸೊಸೈಟಿ ಇಲ್ಲ. ಪ್ರಧಾನಿಗೆ ಅಷ್ಟೂ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು.







