ಅಲೆಲೆ...ಇದು ಕಣಿಲೆ. ತಿಂದವರೇ ಬಲ್ಲರು ಇದರ ರುಚಿ
ದಿನಕ್ಕೊಂದು ತರಕಾರಿ

ಮಳೆಗಾಲದ ಅಪರೂಪದ ಖಾದ್ಯಗಳಲ್ಲಿ ಒಂದಾದ ಕಣಿಲೆಯನ್ನು ಒಮ್ಮೆ ಸವಿದವರು ಅದನ್ನು ಮರೆಯುವುದಿಲ್ಲ. ಹೊಸ ಬಿದಿರಿನ ಮೊಳಕೆಯೇ ಈ ಕಣಿಲೆ. ಭಾರತದಲ್ಲಿ ಮಾತ್ರವಲ್ಲ, ಚೀನಾ,ತೈವಾನ್ ಮತ್ತು ಜಪಾನ್ ಸೇರಿದಂತೆ ಪೂರ್ವ ಏಷ್ಯಾ ಪ್ರದೇಶದಲ್ಲಿ ಹಾಗೂ ಇತರ ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಇದು ಜನರ ಇಷ್ಟದ ಆಹಾರವಾಗಿದೆ. ನಮ್ಮ ಮಲೆನಾಡು ಪ್ರದೇಶಗಳಲ್ಲಿ ಬಿದಿರು ಬೆಳೆಯುವುದು ಹೆಚ್ಚು. ಹೀಗಾಗಿ ಮಳೆಗಾಲ ಕಾಲಿರಿಸಿದ ಬೆನ್ನಿಗೇ ಗ್ರಾಮೀಣ ಯುವಕರು ಕತ್ತಿ ಹಿಡಿದು ಕಣಿಲೆಯನ್ನು ಅರಸಿಕೊಂಡು ಬಿದಿರು ಮೆಳೆಗಳತ್ತ ಹೆಜ್ಜೆ ಹಾಕುವುದು ಸಾಮಾನ್ಯ.
ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದೆ. ನೆಟ್ಟ ನಾಲ್ಕೈದು ವರ್ಷಗಳ ನಂತರ ಬುಡದ ಬೇರುಗಳಿಂದ ಹೊಸ ಬಿದಿರಿನ ಮೊಳಕೆಗಳು ಹುಟ್ಟುತ್ತವೆ. ಇವುಗಳನ್ನು ಕತ್ತರಿಸಿ ಆಹಾರವಾಗಿ ಬಳಸಲಾಗುತ್ತದೆ. ಬಾಂಬುಸಾ ಬಾಂಬೂಸ್, ಬಾಂಬುಸಾ ತುಲ್ಡಾ, ಬಿ.ಪಾಲಿಮೋರ್ಫಾ, ಬಿ.ಬಲ್ಕೂವಾ, ಡೆಂಡ್ರೊಕ್ಯಾಲಮಸ್ ಹೆಮಿಲ್ಟೊನೊನಿಲ್ ಮತ್ತು ಮೆಲೊಕಾನಾ ಬ್ಯಾಸಿಫೆರಾ ಇವು ವ್ಯಾಪಕವಾಗಿ ಬಳಕೆಯಲ್ಲಿರುವ ಕೆಲವು ಮುಖ್ಯ ಖಾದ್ಯಯೋಗ್ಯ ಬಿದಿರು ಬೆಳೆಯ ಜಾತಿಗಳಾಗಿವೆ.
ಬಿಸಿರಿನ ಜಾತಿಯನ್ನು ಅವಲಂಬಿಸಿ ವಿವಿಧ ಋತುಮಾನಗಳಲ್ಲಿ ಮೊಳಕೆಗಳು ತಲೆಯೆತ್ತುತ್ತವೆ. ಅವು ನೆಲದಿಂದ ಸುಮಾರು ಒಂದೆರಡು ಅಡಿ ಎತ್ತರಕ್ಕೆ ಬೆಳೆದು ಬಲಿಯುವ ಮುನ್ನವೇ ಬೇರಿನಿಂದ ಬೇರ್ಪಡಿಸಿ ಆಹಾರವಾಗಿ ಬಳಸಲಾಗುತ್ತದೆ.
ಹೊರಮೈಯಲ್ಲಿ ಎಲೆಗಳ ಹಲವಾರು ಪದರಗಳಿದ್ದು, ಇವುಗಳ ಒಳಗೆ ಶ್ವೇತವರ್ಣದ ಎಳೆಯ ಬಿದಿರಿನ ಕಾಂಡ ಅಡಗಿರುತ್ತದೆ. ನಾರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿ ರುವ ಇದು ಸೌಮ್ಯವಾದ,ಆದರೆ ವಿಭಿನ್ನವಾದ ವಾಸನೆಯನ್ನು ಹೊಂದಿರುತ್ತದೆ. ಆದರೆ ಒಮ್ಮೆ ಬೆಂದಿತೆಂದರೆ ಈ ವಾಸನೆಯಿರುವುದಿಲ್ಲ ಮತ್ತು ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ.
ಕಣಿಲೆ ಹೇಗೆ ಆರೋಗ್ಯವರ್ಧಕ...?
ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಒಳಗೊಂಡಿರುವ ತರಕಾರಿಗಳಲ್ಲಿ ಕಣಿಲೆಯೂ ಒಂದು. 100 ಗ್ರಾಮ್‌ಗಳಷ್ಟು ತಾಜಾ ಕಣಿಲೆ ಕೇವಲ 27 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ ಹೆಚ್ಚಿನ ಕ್ಯಾಲೊರಿಗಳಿರುವ ಆಹಾರವನ್ನು ಬಯಸದವರಿಗೆ ಇದು ಅತ್ಯಂತ ಸೂಕ್ತ ಆಹಾರವಾಗಿದೆ.
ಕಣಿಲೆಯಲ್ಲಿನ ನಾರಿನಲ್ಲಿ ಪಿಷ್ಟೇತರ ಕಾರ್ಬೋಹೈಡ್ರೇಟ್‌ಗಳು ಮಿತವಾದ ಪ್ರಮಾಣ ದಲ್ಲಿರುತ್ತವೆ. 100 ಗ್ರಾಂ ತಾಜಾ ಕಣಿಲೆಯಲ್ಲಿ ಇವುಗಳ ಪ್ರಮಾಣ 2.2 ಗ್ರಾಂ ಇರುತ್ತದೆ. ಈ ನಾರು ಮಲಬದ್ಧತೆಯನ್ನು ನಿವಾರಿಸುವಲ್ಲಿ ನೆರವಾಗುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕರುಳಿಗೆ ಸೀಮಿತಗೊಳಿಸುವ ಮೂಲಕ ಅದನ್ನು ಕಡಿಮೆಗೊಳಿಸುತ್ತದೆ. ಹೆಚ್ಚಿನ ನಾರಿನಂಶವು ಆಹಾರದಲ್ಲಿ ವಿಷಯುಕ್ತ ಪದಾರ್ಥಗಳಿಂದ ಕರುಳನ್ನು ರಕ್ಷಿಸುವ ಮೂಲಕ ಗುದದ್ವಾರದ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಕಂಡು ಬಂದಿದೆ.
ಕಣಿಲೆಯಲ್ಲಿ ಥಿಯಾಮಿನ್, ರಿಬೊಫ್ಲಾವಿಯನ್, ನಿಯಾಸಿನ್, ವಿಟಾಮಿನ್ ಬಿ-6(ಪೆರಿಡೊಕ್ಸಿನ್) ಮತ್ತು ಪ್ಯಾಂಟೊಥಿನಿಕ್ ಆ್ಯಸಿಡ್‌ನಂತಹ ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ವಿಟಾಮಿನ್‌ಗಳು ಹೇರಳ ಪ್ರಮಾಣದಲ್ಲಿವೆ. ಶರೀರದಲ್ಲಿನ ಜೀವಕೋಶಗಳಲ್ಲಿ ಹಾರ್ಮೋನ್‌ಗಳ ಉತ್ಪತ್ತಿ ಮತ್ತು ಪಚನ ಕಾರ್ಯಗಳಿಗೆ ಇವು ಅತ್ಯಗತ್ಯವಾಗಿವೆ.
ಬಿದಿರಿನಲ್ಲಿ ಖನಿಜಗಳು,ವಿಶೇಷವಾಗಿ ಮ್ಯಾಂಗನೀಸ್ ಮತ್ತು ತಾಮ್ರ ಸಾಕಷ್ಟು ಪ್ರಮಾಣದಲ್ಲಿರುತ್ತವೆ, ಜೊತೆಗೆ ಕ್ಯಾಲ್ಸಿಯಂ,ಕಬ್ಬಿಣ ಮತ್ತು ರಂಜಕದಂತಹ ಕೆಲವು ಅಗತ್ಯ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳೂ ಸಣ್ಣ ಪ್ರಮಾಣದಲ್ಲಿರುತ್ತವೆ. ಮ್ಯಾಂಗನೀಸ್‌ನ್ನು ಮಾನವ ಶರೀರವು ಆ್ಯಂಟಿಆಕ್ಸಿಡೆಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ. ಕೆಂಪು ರಕ್ತಕಣಗಳ ಉತ್ಪಾದನೆಗೆ ತಾಮ್ರ ಅಗತ್ಯವಿದೆ. ಜೀವಕೋಶಗಳ ಉಸಿರಾಟದಲ್ಲಿ ಮತ್ತು ಕೆಂಪು ರಕ್ತಕಣಗಳು ರೂಪುಗೊಳ್ಳುವಲ್ಲಿ ಕಬ್ಬಿಣ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
ಕಣಿಲೆಯಲ್ಲಿ ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. 100 ಗ್ರಾಂ ತಾಜಾ ಕಣಿಲೆಯು 533 ಮಿ.ಗ್ರಾಂ ಅಥವಾ ಶರೀರದ ದೈನಂದಿನ ಅಗತ್ಯದ ಶೇ.11ರಷ್ಟು ಪೊಟ್ಯಾಸಿಯಂ ಅನ್ನು ಒಳಗೊಂಡಿರುತ್ತದೆ. ಪೊಟ್ಯಾಸಿಯಂ ಸೋಡಿಯಮ್‌ನ ದುಷ್ಪ ರಿಣಾಮಗಳನ್ನು ನಿಭಾಯಿಸಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಜೀವಕೋಶಗಳು ಮತ್ತು ಶರೀರದಲ್ಲಿನ ದ್ರವಗಳ ಪ್ರಮುಖ ಭಾಗವಾಗಿದೆ.







