ಇಸ್ರೇಲ್ ಪ್ರಧಾನಿ ವಿರುದ್ಧ ವಂಚನೆ, ಲಂಚ ಆರೋಪದ ತನಿಖೆ

ಟೆಲ್‌ಅವಿವ್,ಡಿ.28: ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೇತಾನ್ಯಹು ಅವರು ಲಂಚ ಮತ್ತು ವಂಚನೆ ಆರೋಪದಲ್ಲಿ ಪೂರ್ಣ ಪ್ರಮಾಣದ ಕ್ರಿಮಿನಲ್ ತನಿಖೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಕಳೆದ ಒಂಭತ್ತು ತಿಂಗಳುಗಳಿಂದಲೂ ನೇತಾನ್ಯಹು ವಿರುದ್ಧದ ಆರೋಪಗಳನ್ನು ಪರಿಶೀಲಿಸುತ್ತಿದ್ದು, ಅವರ ವಿರುದ್ಧ ಪೂರ್ಣ ಪ್ರಮಾಣದ ತನಿಖೆಯನ್ನು ಆರಂಭಿಸಲು ಸಕಾರಣಗಳಿವೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆನ್ನಲಾಗಿದೆ.
ದೇಣಿಗೆಗಳಿಗೆ ಸಂಬಂಧಿಸಿದ್ದೆನ್ನಲಾದ ಈ ಲಂಚ ಮತ್ತು ವಂಚನೆ ಆರೋಪಗಳ ಕುರಿತು ವಿಧ್ಯುಕ್ತ ತನಿಖೆಯನ್ನಾರಂಭಿಸಲು ಪೊಲೀಸರು ಇಸ್ರೇಲ್‌ನ ಅಟಾರ್ನಿ ಜನರಲ್‌ರ ಅನುಮತಿಯನ್ನು ಕೋರಿದ್ದಾರೆ.
ತನ್ನ ವಿರುದ್ಧದ ಆರೋಪಗಳನ್ನು ನೇತಾನ್ಯಹು ನಿರಾಕರಿಸಿದ್ದಾರೆ. ಇವೆಲ್ಲ ಅರ್ಥಹೀನ ಆರೋಪಗಳು ಎಂದು ಪ್ರಧಾನಿಯವರ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಚುನಾವಣೆಗಳಲ್ಲಿ ನೇತಾನ್ಯಹು ಅವರ ಗೆಲುವಿನ ಬಳಿಕ ಮತ್ತು ಅದಕ್ಕೂ ಮೊದಲಿನಿಂದಲೂ ಸಹ ಅವರನ್ನು ದ್ವೇಷಿಸುವವರು ಅವರ ಮತ್ತು ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತ ಅವರ ವರ್ಚಸ್ಸಿಗೆ ಕಳಂಕ ಹಚ್ಚುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ವಿರುದ್ಧ ತನಿಖೆ ನಡೆಸುವಂತೆ ಕಳೆದ ಜೂನ್‌ನಲ್ಲಿ ವಿಶೇಷ ಪೊಲೀಸ್ ಘಟಕ ಲಹಾವ್ 433ಕ್ಕೆ ಆದೇಶಿಸಿದ್ದ ಇಸ್ರೇಲ್ ಪೊಲೀಸ್ ಮುಖ್ಯಸ್ಥ ರಾನಿ ಅಲ್‌ಶೇಖ್ ಅವರು, ಆದರೆ ಸಂಪೂರ್ಣ ಗೌಪ್ಯ ಕಾಯ್ದುಕೊಳ್ಳುವಂತೆ ಮತ್ತು ಮಾಧ್ಯಮಗಳಿಗೆ ವಿಷಯದ ಸೋರಿಕೆಯಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ.
ಬೃಹತ್ ಪ್ರಮಾಣದಲ್ಲಿ ಇಂಗಾಲ ತೆರಿಗೆಯನ್ನು ವಂಚಿಸಿದ್ದಕ್ಕಾಗಿ ಪ್ರಸ್ತುತ ಇಸ್ರೇಲಿನಲ್ಲಿ ಎಂಟು ವರ್ಷಗಳ ಜೈಲುಶಿಕ್ಷೆಯನ್ನು ಎದುರಿಸುತ್ತಿರುವ ಫ್ರೆಂಚ್ ಉದ್ಯಮಿ ಅರ್ನಾಡ್ ಮಿಮ್ರಾನ್‌ನಿಂದ ಒಂದು ಮಿಲಿಯನ್ ಯುರೋ(8,50,000 ಪೌಂಡ್)ಗಳನ್ನು ನೇತಾನ್ಯಹು ಸ್ವೀಕರಿಸಿದ್ದರು ಎಂದು ಆರೋಪಿಸಲಾಗಿದೆ. 2009ರ ಇಸ್ರೇಲಿ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ತಾನು ಈ ಮೊತ್ತವನ್ನು ನೇತಾನ್ಯಹು ಅವರಿಗೆ ದೇಣಿಗೆಯಾಗಿ ನೀಡಿದ್ದೆ ಎಂದು ಮಿಮ್ರಾನ್ ವಿಚಾರಣೆ ಸಂದರ್ಭ ಹೇಳಿದ್ದ. ಈ ಆರೋಪವನ್ನು ನೇತಾನ್ಯಹು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ.
ಆದರೆ,2001ರಲ್ಲಿ ಮಿಮ್ರಾನ್‌ನಿಂದ 40,000 ಡಾ.(33,000 ಪೌಂಡ್)ಗಳನ್ನು ಸ್ವೀಕರಿಸಿದ್ದನ್ನು ನೇತಾನ್ಯಹು ಒಪ್ಪಿಕೊಂಡಿದ್ದಾರೆ.
ಪ್ರಧಾನಿಯಾಗಿ ಅಧಿಕಾರಾವಧಿಯಲ್ಲಿ ನೇತಾನ್ಯಹು ಮತ್ತು ಅವರ ಕುಟುಂಬ ಹಲವಾರು ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಲುಕಿವೆ. ಪೊಲೀಸರ ಶಿಫಾರಸಿನ ಮೇರೆಗೆ ಅಟಾರ್ನಿ ಜನರಲ್ ಅವರು ನೇತಾನ್ಯಹು ಅವರ ಪತ್ನಿ ಸಾರಾ ವಿರುದ್ಧದ ಮೂರು ವಂಚನೆ ಪ್ರಕರಣಗಳನ್ನು ಮುಚ್ಚಲು ಯೋಜಿಸುತ್ತಿದ್ದಾರೆ ಎಂದು ಕಳೆದ ಜೂನ್‌ನಲ್ಲಿ ವರದಿಯಾಗಿತ್ತು.
67ರ ಹರೆಯದ ನೇತಾನ್ಯಹು 2009ರಿಂದಲೂ ಇಸ್ರೇಲ್‌ನ ಪ್ರಧಾನಿಯಾಗಿದ್ದಾರೆ. 1996-99ರ ಅವಧಿಯಲ್ಲಿಯೂ ಅವರು ಪ್ರಧಾನಿ ಹುದ್ದೆಯಲ್ಲಿದ್ದರು.







