ಟೂರಿಸ್ಟ್ ಬಸ್-ಓಮ್ನಿ ಢಿಕ್ಕಿ: ಇಬ್ಬರು ಮೃತ್ಯು

ಮಂಜೇಶ್ವರ , ಡಿ.28 : ಕೋಳಿ ಸಾಗಾಟದ ವ್ಯಾನ್ ಹಾಗೂ ಟೂರಿಸ್ಟ್ ಬಸ್ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಮೊಗ್ರಾಲ್ ಕೊಪ್ಪರ ಬಜಾರ್ ಎಂಬಲ್ಲಿ ನಡೆದಿದೆ.
ವ್ಯಾನ್‌ಗೆ ಢಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮಣ್ಣಿನ ಗೋಡೆಯನ್ನು ಕೆಡವಿ ಮುಂದೆ ಸಾಗಿ ರಸ್ತೆ ಪಕ್ಕದ ಮನೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಮನೆಯ ಮುಂಭಾಗ ಪೂರ್ಣವಾಗಿ ನಾಶಗೊಂಡಿತು.
ವ್ಯಾನ್ ಚಾಲಕ ಕುತ್ತಿಕ್ಕೋಲ್-ದೇಲಂಪಾಡಿ ಪಂಚಾಯತ್‌ಗಳ ಗಡಿ ಪ್ರದೇಶವಾದ ಪಳ್ಳಂಜಿಮೂಲೆಯ ಗೋಪಿನಾಥ್ ಎಂಬವರ ಪುತ್ರ ಉಜ್ವಲ್‌ನಾಥ್ (19), ಚೆರ್ಕಳ ಬಾಲಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಗಾಳಿಮುಖ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಮಶೂದ್ (22) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಪಘಾತದಲ್ಲಿ ಬಸ್ ಚಾಲಕ ಪಾಲಕ್ಕಾಡ್‌ನ ಗಿರೀಶ್ (42) ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಕಾಸರಗೋಡಿಗೆ ಕೋಳಿಗಳನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಹಾಗೂ ಕಲ್ಲಡ ಟ್ರಾವೆಲ್ಸ್‌ನ ಟೂರಿಸ್ಟ್ ಬಸ್ ತಿರುವನಂತಪುರದಿಂದ ಮಂಗಳೂರಿಗೆ ತೆರಳುತಿತ್ತು. ಈ ಎರಡು ವಾಹನಗಳು ಮೊಗ್ರಾಲ್ ಕೊಪ್ಪರ ಬಜಾರ್‌ಗೆ ತಲುಪಿದಾಗ ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತು. ಅಪಘಾತದ ಬಳಿಕ ವ್ಯಾನ್‌ಗೆ ಬೆಂಕಿ ಹತ್ತಿಕೊಂಡಿತು.
ನಿಯಂತ್ರಣ ತಪ್ಪಿದ ಟೂರಿಸ್ಟ್ ಬಸ್ ರಸ್ತೆ ಬದಿಯ ಮಣ್ಣಿನ ಗೋಡೆಗೆ ಢಿಕ್ಕಿ ಹೊಡೆದು , ಬಳಿಕ ಮುಹಮ್ಮದ್ ಶೆರೀಫ್ ಎಂಬವರ ಮನೆಯ ಮುಂಭಾಗದ ಗೋಡೆಗೆ ಢಿಕ್ಕಿಹೊಡೆದು ನಿಂತಿದೆ. ಇದರಿಂದ ಮನೆಯ ಮುಂಭಾಗ ಹಾಗೂ ಹೆಂಚಿನ ಛಾವಣಿ ನಾಶಗೊಂಡಿದೆ. ಈ ವೇಳೆ ಮುಹಮ್ಮದ್ ಶೆರೀಫ್, ಪತ್ನಿ ಖದೀಜಾ ಹಾಗೂ ಪುತ್ರ ಸಿನಾನ್ ಮನೆಯೊಳಗೆ ನಿದ್ರಿಸುತ್ತಿದ್ದರು.
ಫ್ಯಾನ್ ನ ಶಬ್ದಕ್ಕೆ ಅಪಘಾತದ ಸದ್ದು ಇವರಿಗೆ ಕೇಳಿರಲಿಲ್ಲ. ಜನರು ತಲುಪಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದಾಗಲೇ ಅಪಘಾತದ ವಿವರ ಮುಹಮ್ಮದ್ ಶೆರೀಫ್‌ಗೆ ತಿಳಿದುಬಂದಿದೆ.
ಮೃತಪಟ್ಟ ಉಜ್ವಲ್‌ನಾಥ್ ತಾಯಿ ಉಷಾ, ಸಹೋದರರಾದ ಗೋಕುಲ್‌ನಾಥ್, ರಾಹುಲ್‌ನಾಥ್ ಹಾಗೂ ಅಪಾರ ಬಂಧು ಮಿತ್ರನ್ನು ಅಗಲಿದ್ದಾರೆ.
ಮೃತಪಟ್ಟ ಮಶೂದ್ ತಾಯಿ ಉಮೈಬಾ, ಸಹೋದರ-ಸಹೋದರಿಯರಾದ ಮನಾಫ್, ಮಹ್‌ಶಿ, ಮಹ್‌ರೂಫ, ಮಶ್ರೂಫಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







