ಅಗ್ನಿ-5 ಉಡಾವಣೆಗೆ ಚೀನದ ಪ್ರತಿಕ್ರಿಯೆಗೆ ವಾಯುಪಡೆ ಮುಖ್ಯಸ್ಥ ರಾಹಾ ತಿರಸ್ಕಾರ

ಹೊಸದಿಲ್ಲಿ,ಡಿ.28: ಭಾರತದ ದೀರ್ಘವ್ಯಾಪ್ತಿಯ, ಪರಮಾಣು ಸಮರ್ಥ ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗಕ್ಕೆ ಚೀನಾದ ಪ್ರತಿಕ್ರಿಯೆಯನ್ನು ಇಂದಿಲ್ಲಿ ತಳ್ಳಿಹಾಕಿದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ ಅವರು, ಶತ್ರುಗಳನ್ನು ಹಿಮ್ಮೆಟ್ಟಿಸುವ ತನ್ನ ಸಾಮರ್ಥ್ಯ ವೃಧ್ಧಿಯ ಕೆಲಸವನ್ನು ಭಾರತವು ಮುಂದುವರಿಸಬೇಕು ಎಂದು ಹೇಳಿದರು.
ಅಣ್ವಸ್ತ್ರ ಪ್ರಸರಣದಂತಹ ನಿಷೇಧಿತವಲ್ಲದ ಏನನ್ನಾದರೂ ಯಾರಾದರೂ ಮಾಡುತ್ತಿದ್ದರೆ ಆ ಕುರಿತು ಯಾರೂ ಮಾತನಾಡಬೇಕಿಲ್ಲ ಎಂದು ಚೀನಾವನ್ನು ಉದ್ದೇಶಿಸಿ ಹೇಳಿದ ಅವರು, ಒಳಸಂಚು ಮತ್ತು ನಿರ್ಬಂಧಿತ ತಂತ್ರಜ್ಞಾನ ವರ್ಗಾವಣೆಯಂತಹ ವಿಷಯಗಳಲ್ಲಿ ಈ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ ಎಂದರು.
ಭಾರತವು ಶತ್ರುಗಳ ದಾಳಿಯನ್ನು ತಡೆಯಲು ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ ಅಷ್ಟೇ ಎಂದ ಅವರು ,ಶತ್ರುದೇಶಗಳ ಹೃದಯಭಾಗದಲ್ಲಿ ದಾಳಿಯನ್ನು ನಡೆಸಲು ಸಾಧ್ಯವಾಗುವಂತೆ ದೇಶವು ತನ್ನ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಮತ್ತು ಇಂತಹ ಸಾಮರ್ಥ್ಯವು ಶತ್ರುಗಳು ದಾಳಿಯ ದುಸ್ಸಾಹಸ ಮಾಡುವುದನ್ನು ತಡೆಯುತ್ತದೆ ಎಂದು ಡಿ.31ರಂದು ಸೇವೆಯಿಂದ ನಿವೃತ್ತರಾಗುತ್ತಿರುವ ರಾಹಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು.
ಅಗ್ನಿ-5 ಕ್ಷಿಪಣಿಯು 5,000 ಕಿ.ಮೀ.ದೂರದ ಗುರಿಯ ಮೇಲೆರಗುವ ಸಾಮರ್ಥ್ಯವನ್ನು ಹೊಂದಿದ್ದು, ಇಡೀ ಚೀನಾ ಅದರ ವ್ಯಾಪ್ತಿಯಲ್ಲಿ ಬರುತ್ತದೆ.
ಭಾರತದ ಪರೀಕ್ಷಾರ್ಥ ಕ್ಷಿಪಣಿ ಪ್ರಯೋಗಕ್ಕೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯವು, ಈ ಪ್ರಯೋಗವು ವಿಶ್ವಸಂಸ್ಥೆ ಭದ್ರತಾ ಮಂಡಲಿಯ ನಿಯಮಗಳನ್ನು ಪಾಲಿಸಿದೆ ಮತ್ತು ದಕ್ಷಿಣ ಏಷ್ಯಾದ ವ್ಯೆಹಾತ್ಮಕ ಸಮತೋಲನದ ಸುರಕ್ಷತೆಯನ್ನು ಕಾಯ್ದುಕೊಂಡಿದೆ ಎಂದು ತನ್ನ ದೇಶವು ಆಶಿಸಿದೆ ಎಂದು ನಿನ್ನೆ ಹೇಳಿದ್ದರು.







