ಹಸುಗೂಸು ಅಪಹರಣ ಪ್ರಕರಣ : ಆರೋಪಿಗಳಿಗೆ ಜಾಮೀನು, ಬಿಡುಗಡೆ
ಉಪ್ಪಿನಂಗಡಿ, ಡಿ.28 : 58 ದಿನಗಳ ಮಗುವನ್ನು ತಂದು ಬಾಡಿಗೆ ಮನೆಯಲ್ಲಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕೇಸು ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದ 3 ಮಂದಿ ಆರೋಪಿಗಳನ್ನು ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಬೆಂಗಳೂರು ಎಚ್.ಬಿ.ಆರ್. ಲೇಔಟ್ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್, ಹಿರೇಬಂಡಾಡಿ ಗ್ರಾಮದ ಆನಡ್ಕ ನಿವಾಸಿ ಶಿಹಾಬುದ್ದೀನ್ ಅಹಮದ್, ಹಿರೇಬಂಡಾಡಿ ಅಡೇಕಲ್ ಕೋನಾಡಿ ನಿವಾಸಿ ಮಹಮ್ಮದ್ ಸಬೀರ್ ಇವರುಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜಮೀನು ನೀಡಿ ಬಿಡುಗಡೆಗೊಳಿಸಿದೆ.
ಆರೋಪಿತರು 58 ದಿನಗಳ ಗಂಡು ಮಗುವನ್ನು ಪೆರ್ನೆ ಬಳಿ ಬಾಡಿಗೆ ಮನೆಯಲ್ಲಿ ಇರಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಮಗವನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮಗುವಿನ ತಾಯಿ ಕರಿಷ್ಮಾ, ತಂದೆ ಜಲಾಲು ಯಾನೆ ಜಲಾಲುದ್ದೀನ್ ಎಂಬ ದಾಖಲೆ ಪತ್ರಗಳು, ಮಗು ಜನಿಸಿದ ಆಸ್ಪತ್ರೆ ಚೀಟಿ, ತಾಯಿ ಕಾರ್ಡುಗಳು ಲಭ್ಯವಾಗಿದ್ದವು.
ಪೊಲೀಸರ ತನಿಖೆ ವೇಳೆ ಆರೋಪಿತರು "ಮಗುವನ್ನು ಆರೈಕೆ ಮಾಡುವ ಸಲುವಾಗಿ ತಂದಿರುವುದಾಗಿ" ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಸಂಶಯಗೊಂಡಿದ್ದ ಪೊಲೀಸರು ಆರೋಪಿಗಳು ಮಗುವನ್ನು ಮಾರಾಟ ಮಾಡುವ ಸಲುವಾಗಿ ಅಪಹರಿಸಿ ತಂದಿರುವ ಸಾಧ್ಯತೆ, ಇದೊಂದು ಮಾನವ ಕಳ್ಳ ಸಾಗಾಟ ಪ್ರಕರಣ ಎಂದು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪಿತರ ಪರವಾಗಿ ವಕೀಲರಾದ ನಝೀರ್ ಬೆದ್ರೋಡಿ, ಮಜೀದ್ ಖಾನ್, ಅಶ್ರಫ್ ಅಗ್ನಾಡಿ, ನೌಶಾದ್ ನೆಕ್ಕಿಲಾಡಿ, ಅಸ್ಫಕ್ ಕೆಂಪಿ ವಾದಿಸಿದ್ದರು.







