ತಲಪಾಡಿ ಗ್ರಾಮ ಸಭೆ: ದಾರಿದೀಪ ಅವ್ಯವಹಾರದ ಆರೋಪ
ಉಳ್ಳಾಲ, ಡಿ.28 : ತಲಪಾಡಿ ಗ್ರಾಮದ 2016-17ನೇ ಸಾಲಿನ ಗ್ರಾಮ ಸಭೆಯು ಬುಧವಾರ ನಡೆದಿದ್ದು , ಸಭೆಯಲ್ಲಿ ದಾರಿದೀಪ ದುರಸ್ತಿ, ನಿರ್ವಹಣೆಯಲ್ಲಿ ಅವ್ಯವಹಾರ ಆಗಿದೆ ಎಂಬ ವಿಷಯದಲ್ಲಿ ಆರೋಪ ಪ್ರತ್ಯಾರೋಪಗಳು ಮೂಲಕ ಕೋಲಾಹಲವೇರ್ಪಟ್ಟ ಘಟನೆ ನಡೆಯಿತು.
ಸ್ಥಳೀಯ ಕನ್ನಡ ಪರ ಸಂಘಟನೆಯ ಅಧ್ಯಕ್ಷ ಸಿದ್ಧೀಕ್ , ದಾರಿದೀಪ ನಿರ್ವಹಣೆ ಮತ್ತು ದುರಸ್ಥಿ ಕಾಮಗಾರಿಯ ಟೆಂಡರನ್ನು ಕರೆಯುವಾಗ ಸಾರ್ವಜನಿಕರಿಗೆ ಯಾರಿಗೂ ಮಾಹಿತಿ ನೀಡದೆ ರಹಸ್ಯವಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು , ಇದರಲ್ಲಿ ಅಭಿವೃದ್ಧಿ ಅಧಿಕಾರಿಯಾದ ಕೃಷ್ಣನಾಯಕ್ ಅವರು ಭ್ರಷ್ಟಾಚಾರ ಮಾಡಿದ್ದಾರೆಂದು ನೇರ ಆರೋಪ ಮಾಡಿದರು. ಈ ವರುಷದ ಅವಧಿಯಲ್ಲಿ ದಾರಿದೀಪ ದುರಸ್ತಿ ಮತ್ತು ನಿರ್ವಹಣೆಗೆ ಒಟ್ಟು 1,66,400 ರೂಪಾಯಿ ಖರ್ಚು ತಗುಲಿದ್ದು ಹೇಗೆಂದು ಲೆಕ್ಕ ಕೊಡುವಂತೆ ಪಟ್ಟು ಹಿಡಿದರು.
ಆರೋಪಕ್ಕೆ ಉತ್ತರಿಸಿದ ಕೃಷ್ಣ ನಾಯಕ್ , ಟೆಂಡರು ಪ್ರಕ್ರಿಯೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟನೆ ಜಾಹಿರಾತು ಹಾಕಿದ್ದು ,ಪಂಚಾಯತ್ ನೋಟೀಸ್ ಬೋರ್ಡಿನಲ್ಲೂ ಪ್ರಕಟಿಸಿದ್ದೆವು. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿದ ನಂತರ ಟೆಂಡರು ನೀಡಲಾಗಿತ್ತು. ನಿರಾಧಾರ ಆರೋಪ ಮಾಡುವುದಕ್ಕಿಂತ ನಾನು ಲೋಪವೆಸಗಿದ್ದೇ ಹೌದಾದಲ್ಲಿ ಮಾಹಿತಿ ಹಕ್ಕಲ್ಲಿ ಕೇಳಿ ಎಂದು ಏರು ಧ್ವನಿಯಲ್ಲಿ ಉತ್ತರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ್ ನಾಯ್ಕ ಅವರು ಮಾತನಾಡಿ, ಗ್ರಾಮಸ್ಥರು ಸಮಸ್ಯೆಗಳನ್ನು ಹೇಳುವುದು ಸಹಜ. ಆದರೆ ಅಧಿಕಾರಿಗಳಾದ ನೀವು ಏರು ಧ್ವನಿಯಲ್ಲಿ ಮಾತನಾಡದೆ ಸೌಮ್ಯ ಸ್ವಭಾವದಿಂದಲೇ ಜನರನ್ನು ಗೆಲ್ಲಬೇಕೆಂದು ಸಲಹೆ ನೀಡಿದರು.
ಡಿಪಿಆರ್ ನೀರಿನ ಯೋಜನೆಗೆ ತಲಪಾಡಿ ಗ್ರಾಮವನ್ನು ಆಯ್ದುಕೊಳ್ಳದಕ್ಕೆ ಸಭೆಯಲ್ಲಿ ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು.
ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು.
ನೋಡಲ್ ಅಧಿಕಾರಿಯಾಗಿ ಜೀವನ್ ಕುಮಾರ್ ಭಾಗವಹಿಸಿದ್ದರು.
ಉಪಾಧ್ಯಕ್ಷೆ ಜಯಲಕ್ಷ್ಮೀ, ತಾಲೂಕು ಪಂಚಾಯಿತಿ ಸದಸ್ಯ ಸಿದ್ಧೀಕ್ ಕೊಳಂಗೆರೆ ಮೊದಲಾದವರು ಉಪಸ್ಥಿತರಿದ್ದರು.





.jpg.jpg)



