ಸ್ಲಂ ಏರಿಯಾ ನಿವಾಸಿಗಳ ಮನೆ ಖಾಯಂಗೆ ಸರಕಾರ ಚಿಂತನೆ: ಖಾದರ್

ಮಂಗಳೂರು, ಡಿ.28: ನಗರ ಹಾಗೂ ಗ್ರಾಮಾಂತರ ಪ್ರದೇಶದ ಸ್ಲಂ ಏರಿಯಾ ನಿವಾಸಿಗಳ ಮನೆಗಳನ್ನು ಖಾಯಂಗೊಳಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಕರಾವಳಿ ಉತ್ಸವ ಮೈದಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಲಂ ಏರಿಯಾಗಳಲ್ಲಿ ಕನಿಷ್ಠ 15 ವರ್ಷ ಮೇಲ್ಪಟ್ಟು ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಸಣ್ಣ ಮೊತ್ತದ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆ ಮನೆಯನ್ನು ಖಾಯಂ ಮಾಡುವ ಯೋಜನೆ ಸರಕಾರದ ಮುಂದಿದೆ ಎಂದು ಹೇಳಿದರು.
ಉಜ್ವಲ ಜ್ಯೋತಿ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗುವುದು ಎಂದ ಸಚಿವ ಖಾದರ್, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ ಮೊದಲ ವಾರದಲ್ಲಿ ನಡೆಯಲಿದೆ. ಈಗಾಗಲೆ ಎಲ್ಲ ಸಿದ್ಧತೆ ನಡೆದಿದ್ದು, ಅರ್ಜಿ ಸಲ್ಲಿಸಿದ ಎರಡು ವಾರದೊಳಗೆ ಪಡಿತರ ಚೀಟಿ ಕೈ ಸೇರುವಂತೆ ಮಾಡಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯ ಬಿಜೆಪಿಯ ಕೂಸು. ಈಗ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರವಾಗಿ ಮೊನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಯಾವುದೇ ಅಪಸ್ವರ ಎತ್ತದ ಬಿಜೆಪಿಗರು ಸಭೆಯಿಂದ ಹೊರ ಬಂದ ಬಳಿಕ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ತಾಕತ್ತಿದ್ದರೆ ಬಿಜೆಪಿ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಎತ್ತಿನಹೊಳೆ ಯೋಜನೆಯ ವಿರುದ್ಧ ಉಲ್ಲೇಖ ಮಾಡಲಿ ಎಂದು ಖಾದರ್ ಸವಾಲು ಹಾಕಿದರು.







