ಆಹಾರ ಪದಾರ್ಥ ಮಾರಾಟಗಾರರ ಸಮಾವೇಶ : ‘ಫುಡ್‌ಝೋನ್ ’ ರಚಿಸಲು ಒತ್ತಾಯ

ಮಂಗಳೂರು, ಡಿ.28: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಲು ಸ್ಥಾಪಿತ ತಾಸಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸರಕಾರ ಮಸೂದೆಯೊಂದು ಜಾರಿಗೊಳಿಸಿದ್ದು, ಅದರನ್ವಯ ಆಹಾರ ಪದಾರ್ಥ ಮಾರಾಟ ಮಾಡುವ ಗೂಡಂಗಡಿಗಳಿಗೆ ಫುಡ್ ರೆನ್ ರಚಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ ಎಂದು ಸಿಐಟಿಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ನಗರದ ಹಲವೆಡೆ ‘ಫುಡ್‌ರೆನ್’ ರಚಿಸಲು ಒತ್ತಾಯಿಸಿ ಸಿಐಟಿಯು ದ.ಕ. ಜಿಲ್ಲಾ ಬೀದಿ ಬದಿ ವ್ಯಾಪರಸ್ಥರ ಸಂಘದಿಂದ ಬುಧವಾರ ನಗರದ ಎನ್‌ಜಿಒ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಆಹಾರ ಪದಾರ್ಥ ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಬೀದಿಬದಿ ವ್ಯಾಪಾರಸ್ಥರಿಗಾಗಿ ರಚಿಸಲಾದ ವ್ಯಾಪಾರ ವಲಯದಲ್ಲೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕು ಎನ್ನುವುದು ತೀರಾ ಅವೈಜ್ಞಾನಿಕವಾಗಿದೆ. ಆದ್ದರಿಂದ ಮಂಗಳೂರಿನ ಹಲವು ಕಡೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಆಹಾರ ವಲಯಗಳನ್ನು ರಚಿಸಬೇಕಾಗಿದೆ. ಇದಕ್ಕಾಗಿ ಆಹಾರ ಪದಾರ್ಥ ಮಾರಾಟಗಾರರು ಸಂಘಟಿತ ಶಕ್ತಿಯಾಗಿ ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದು ಸುನೀಲ್ ಕುಮಾರ್ ಬಜಾಲ್ ಕರೆ ನೀಡಿದರು.
ಮಂಗಳೂರು ನಗರದಲ್ಲಿ ಪಂಪ್‌ವೆಲ್, ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ, ಕದ್ರಿ ಪಾರ್ಕ್, ಸರ್ವಿಸ್ ಬಸ್‌ಸ್ಟಾಂಡ್ ಸೇರಿ ಕನಿಷ್ಠ 5 ಕಡೆಗಳಲ್ಲಿ ತಕ್ಷಣವೇ ‘ಫುಡ್‌ಝೋನ್’ ರಚಿಸಲು ಮಂಗಳೂರು ಮಹಾನಗರ ಪಾಲಿಕೆಯು ಮುಂದಾಗಬೇಕು ಎಂದು ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಆರ್.ಎಸ್. ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಹಿರಿಯ ಮುಖಂಡ ಅಣ್ಣಯ್ಯ ಕುಲಾಲ್ ವಹಿಸಿದ್ದರು.
ಈ ಸಂದರ್ಭ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಆಹಾರ ಪದಾರ್ಥ ಮಾರಾಟಗಾರರ ಮುಖಂಡ ಶ್ರೀಧರ್ ಮತ್ತಿರರು ಉಪಸ್ಥಿತರಿದ್ದರು.
ಹರೀಶ್ ಕುಮಾರ್ ಸ್ವಾಗತಿಸಿದರು. ಹಿತೇಷ್ ಪೂಜಾರಿ ವಂದಿಸಿದರು.
ಸಮಿತಿ ರಚನೆ:
ಸಮಾವೇಶವು ಆಹಾರ ಪದಾರ್ಥ ಮಾರಾಟಗಾರರ ಉಪಸಮಿತಿಯ ಪ್ರಧಾನ ಸಂಚಾಲಕರಾಗಿ ಹರೀಶ್ ಕುಮಾರ್, ಸಹಸಂಚಾಲಕರಾಗಿ ಅಣ್ಣಯ್ಯ ಕುಲಾಲ್, ಹಿತೇಷ್ ಪೂಜಾರಿ, ಶ್ರೀಧರ, ರವಿ ಪೂಜಾರಿ, ಕಿಶೋರ್ ಕುಮಾರ್, ನಟರಾಜ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ 18 ಮಂದಿಯನ್ನು ಆಯ್ಕೆ ಮಾಡಲಾಯಿತು.







