'ಎತ್ತಿನಹೊಳೆ, ಕೆ.ಸಿ.ವ್ಯಾಲಿ ಯೋಜನೆ ಕೈ ಬಿಡುವ ಪ್ರಶ್ನೆಯೇ ಇಲ್ಲ'
ಕೋಲಾರ ಜಿಪಂ ಕೆಡಿಪಿ ಸಭೆಯಲ್ಲಿ ಸಚಿವ ರಮೇಶ್ ಕುಮಾರ್‌ಸ್ಪಷ್ಟನೆ

ಕೋಲಾರ, ಡಿ.28: ಎತ್ತಿನಹೊಳೆ, ಕೆ.ಸಿ.ವ್ಯಾಲಿ ಹಾಗೂ ರೈಲ್ವೇ ಕೋಚ್ ಫ್ಯಾಕ್ಟರಿ ಯೋಜನೆಗಳು ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಾಳಾಗಿದ್ದು, ಇವುಗಳನ್ನು ಸರಕಾರ ಯಶಸ್ವಿಯಾಗಿ ಪೂರ್ಣಗೊಳಿಸಲಿದೆ ಎಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಯೋಜನೆಗಳ ಅನುಷ್ಠಾನಕ್ಕೆ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದ ಅವರು, ಈ ಯೋಜನೆಗಳನ್ನು ಸರಕಾರ ಕೈ ಬಿಡುವ ಪ್ರಶ್ನೆಯೇ ಇಲ್ಲ, ಯೋಜನೆಗಳನ್ನು ಪೂರ್ಣ ಮಾಡಿಯೇ ತೀರುತ್ತೇವೆ ಎಂದು ಸ್ಪಷ್ಟ ಪಡಿಸಿದ ಅವರು, ಕೆ.ಸಿ.ವ್ಯಾಲಿ ಕಾಮಗಾರಿಯೂ ಶೀಘ್ರ ಗತಿಯಲ್ಲಿ ಸಾಗುತ್ತಿದೆ. ವ್ಯಾಲಿಯಿಂದ ಕೋಲಾರದ ವಿವಿಧ ಕೆರೆಗಳಿಗೆ ನೀರಿ ಹರಿಸಲಾಗುತ್ತದೆ ಎಂದರು.
ಜಿಲ್ಲೆಯಾದ್ಯಂತ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ. ಏಪ್ರಿಲ್ ಕೊನೆಯವರೆಗೆ ನೀರಿನ ಸಮಸ್ಯೆ ಕಾಡಲಿದೆ. ಈ ವೇಳೆ ಜನತೆಗೆ ಸೂಕ್ತವಾಗಿ ಸ್ಪಂದಿಸಬೇಕು. ವಿದ್ಯುತ್ ಸರಬರಾಜನ್ನು ಸೂಕ್ತವಾಗಿ ನಿಭಾಯಿಸಬೇಕು. ಏಪ್ರಿಲ್ ಕೊನೆಯವರೆಗೂ ಸಿಬ್ಬಂದಿ ರಜೆಯ ಮೇಲೆ ತೆರಳಬಾರದು. ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡದೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಜನತೆಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂಬ ಉದ್ದೇಶದಿಂದ 500ಕ್ಕೂ ಹೆಚ್ಚು ಮಂದಿ ಜನಸಂಖ್ಯೆ ಇರುವೆಡೆಯಲ್ಲಿ ಆರ್‌ಒ ಘಟಕಗಳನ್ನು ನಿರ್ಮಾಣ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ತಾಪಂ ವ್ಯಾಪ್ತಿಯಲ್ಲಿ ಎಷ್ಟು ಆರ್‌ಒ ಘಟಕಗಳನ್ನು ನಿರ್ಮಿಸಲಾಗಿದೆ, ಎಷ್ಟು ಅವಶ್ಯಕತೆ ಇದೆ, ಆಕ್ಷನ್‌ಪ್ಲಾನ್ ಎಷ್ಟಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದಂತೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಇದನ್ನು ಕೇವಲ ದಲಿತರ ಕಾಲನಿಗಳಲ್ಲಿ ಮಾತ್ರ ನಿರ್ಮಿಸಬೇಕೆಂಬ ಎಂಬ ತಪ್ಪು ಕಲ್ಪನೆ ಬೇಡ. ಮೊದಲು ಬಂದ ಹಣದಲ್ಲಿ ದಲಿತರು ವಾಸಿಸುವ ಸ್ಥಳಗಳಲ್ಲಿ ಸಿಮೆಂಟ್ ರಸ್ತೆಗಳನ್ನು ಹಾಕಿಸಿ. ನಂತರ ಬರುವ ಅನುದಾನದಲ್ಲಿ ಗ್ರಾಮದ ಇತರ ರಸ್ತೆಗಳನ್ನು ಮಾಡಿಸಬಹುದು. ಎಲ್ಲರೂ ರಸ್ತೆಗಳಲ್ಲಿ ಸಂಚಾರ ಮಾಡುತ್ತಾರೆ. ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟತೆ ಇರಲಿ ಎಂದು ಸಲಹೆ ನೀಡಿದರು.
ರಸ್ತೆಗಳನ್ನು ಮಾಡುವಾಗ ಪಕ್ಕದಲ್ಲಿ ನೀರು ಹರಿದು ಹೋಗಲು ಡ್ರೈನೇಜ್‌ಗಳನ್ನು ನಿರ್ಮಾಣ ಮಾಡಿ. ಈ ಡ್ರೈನೇಜ್‌ಗಳು 1.5 ಅಡಿಗಿಂತ ಹೆಚ್ಚಾಗಿ ಇರಬಾರದು. ರಸ್ತೆಗಳ ಗುಣಮಟ್ಟದಲ್ಲಿ ರಾಜೀಯಾಗುವ ಮಾತೇ ಇಲ್ಲ ಎಂದು ಎಚ್ಚರಿಸಿದರು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಖಾಲಿ ಉಳಿದಿದ್ದ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಪ್ರತಿ 10 ಕಿ.ಮೀ. ವ್ಯಾಪ್ತಿಗೆ ಆ್ಯಂಬ್ಯುಲೆನ್ಸ್ ಸೇವೆಯನ್ನು ನೀಡಲಾಗುತ್ತಿದೆ. ಔಷಧಗಳನ್ನು ಸೂಕ್ತ ರೀತಿಯಲ್ಲಿ ನೀಡಲಾಗುತ್ತಿದೆ.
ದಿನಾಂಕ ಮುಗಿದ ಔಷಧಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಿಲ್ಲ ಎಂದು ಡಿಎಚ್‌ಒ ಅವರು ಸಭೆಗೆ ಮಾಹಿತಿ ನೀಡಿದಾಗ, ನಕಲಿ ವೈದ್ಯರ ಹಾಳಿಯನ್ನು ತಡೆಯಲು ಸೂಚನೆ ನೀಡಿದರು. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 250 ಶಿಕ್ಷಕರು ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ 78 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಸಗಿದೆ ಎಂದು ಪ್ರಭಾರ ಡಿಡಿಪಿಐ ರಂಗಯ್ಯ ಅವರು ಮಾಹಿತಿ ನೀಡಿದಾಗ, ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಪರೀಕ್ಷೆ ದಿನಾಂಕ ನಿಗದಿಯಾಗಿದೆ. ಶಿಕ್ಷಕರೇ ಇಲ್ಲವೆಂದರೆ ಮಕ್ಕಳ ಗತಿ ಏನು ಎಂದು ಸಿಡಿಮಿಡಿಗೊಂಡರು.







