‘ಸ್ವಚ್ಚ ಭಾರತ ನಿರ್ಮಲ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ’ ಕುರಿತ ಪೂರ್ವಭಾವಿ ಸಭೆ

ಮಂಗಳೂರು, ಡಿ.28: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ‘ಸ್ವಚ್ಚ ಭಾರತ ನಿರ್ಮಲ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ’ ಕ್ರಿಯಾಯೋಜನೆಯ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗಳು ಮತ್ತು ಇತರೆ ಸಂಘಸಂಸ್ಥೆಗಳ ಸಹಯೋಗದೊಂದಿಗೆ ‘ಶ್ರದ್ಧಾಕೇಂದ್ರಗಳ ಶುಚಿಗೊಳಿಸುವ ಅಭಿಯಾನದ ಪೂರ್ವಭಾವಿ ಸಭೆ ಬುಧವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ದೈವ-ದೇವಸ್ಥಾನಗಳು, ಮಸೀದಿ, ಚರ್ಚು, ಗುರುದ್ವಾರ, ಬೌದ್ದವಿಹಾರಗಳೆಲ್ಲವೂ ಸಮಾಜದ ಆಸ್ತಿಗಳು. ಈ ಧಾರ್ಮಿಕ ಕೇಂದ್ರಗಳನ್ನು ಸ್ವಚ್ಚತೆಯೊಂದಿಗೆ ನಿರ್ಮಲವನ್ನಾಗಿಸಿ ಆರಾಧಿಸಿದಾಗ ಅಲ್ಲಿಗೆ ಆಗಮಿಸುವ ಭಕ್ತರಿಗೆ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಜಿಲ್ಲೆಯಲ್ಲಿರುವ ಎಲ್ಲ ಶ್ರದ್ಧಾಕೇಂದ್ರಗಳನ್ನು ಸ್ವಚ್ಚ ಧಾರ್ಮಿಕ ತಾಣಗಳ ತವರೂರನ್ನಾಗಿಸುವ ಪ್ರಯತ್ನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಸಭೆಯನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಶರವು ದೇವಸ್ಥಾನದ ಅನುವಂಶಿಕ ಅರ್ಚಕ ರಾಘವೇಂದ್ರ ಶಾಸ್ತ್ರಿ ಕರೆ ನೀಡಿದರು.
ಡಾ. ಹೆಗ್ಗಡೆಯ ಆಶಯದಂತೆ ಎಲ್ಲ ಧಾರ್ಮಿಕ ಶ್ರದ್ಧಾಕೇಂದ್ರಗಳ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಅಭಿಯಾನದ ಅಂಗವಾಗಿ ಎಲ್ಲ ಕ್ಷೇತ್ರದ ಪ್ರಮುಖರ ಸಭೆ ಕರೆಯಲಾಗಿದೆ ಎಂದು ಮಂಗಳೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀಧರ ಹೊಳ್ಳ ತಿಳಿಸಿದರು.
ವೇದಿಕೆಯಲ್ಲಿ ಕುಡುಪು ಕೃಷ್ಣರಾಜ ತಂತ್ರಿವರ್ಯರು, ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಮನಪಾ ಸಚೇತಕ ಶಶಿಧರ ಹೆಗ್ಡೆ, ವಿಹಿಂಪ ನಾಯಕ ಪ್ರೊ.ಎಂ.ಬಿ. ಪುರಾಣಿಕ್, ಮುಲ್ಕಿ ದುರ್ಗಾಪರಮೇಶ್ವರಿ ದೇಗುಲದ ಅನುವಂಶಿಕ ಮೊಕ್ತೇಸರ ಮನೋಹರ ಶೆಟ್ಟಿ, ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್‌ಡಿಎಂ ಕಾಲೇಜಿನ ನಿರ್ದೇಶಕ ದೇವರಾಜ್, ಪ್ರಾಂಶುಪಾಲ ತಾರನಾಥ್, ಅಡ್ಯಾರು ಜಯಲಕ್ಷ್ಮೀ ಹೆಗ್ಡೆ, ವಿಜಯಲಕ್ಷ್ಮೀ, ಇಸ್ಮಾಯೀಲ್ ಅಶ್ರಫ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಸದಾಶಿವ, ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಉಮರಬ್ಬ, ಡಾ. ಪ್ರಶಾಂತ್ ಮಾರ್ಲ ಉಪಸ್ಥಿತರಿದ್ದರು.
ಮೂರು ಹಂತದಲ್ಲಿ 50 ಧಾರ್ಮಿಕ ಕೇಂದ್ರಗಳಲ್ಲಿ ಬೃಹತ್ ಅಭಿಯಾನ
ಜ.13 ರೊಳಗೆ 3 ಪ್ರತ್ಯೇಕ ದಿನಗಳಂದು ನಗರದ 50 ಧಾರ್ಮಿಕ ಕ್ಷೇತ್ರಗಳಲ್ಲಿ ಮಾದರಿಯಾಗಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತದ ಸ್ವಚ್ಚತೆ ಮೂರು ಹಂತಗಳಲ್ಲಿ ನಡೆಯಲಿದೆ. ದೇಗುಲ ಸಹಿತ ಇತರೆ ಶ್ರದ್ಧಾಕೇಂದ್ರಗಳ ಒಳಭಾಗದಲ್ಲಿ ಗರ್ಭಗುಡಿ ಶುದ್ಧೀಕರಣ, ಅರ್ಚಕರು ಉಡುಪು ಸ್ವಚ್ಚ ಮತ್ತು ಸಭ್ಯತೆಯನ್ನು ಅನುಸರಿಸುವುದೆರೆಡೆಗೆ ಗಮನ, ಪ್ಲಾಸ್ಟಿಕ್‌ಮುಕ್ತವಾದ ಪೂಜಾ ಸಾಮಾಗ್ರಿಗಳ ಬಳಕೆ ಚಿಂತನೆ, ಆವರಣದೊಳಗೆ ಸಾರ್ವಜನಿಕರ ನಡಾವಳಿ (ವಸ್ತ್ರಸಂಹಿತೆ-ವ್ಯಸನಮುಕ್ತ ಸಾರ್ವಜನಿಕ ವ್ಯವಹಾರಗಳು,ಪ್ರಸಾದಗಳನ್ನು ಗೋಡೆಗಳಿಗೆ ಹಚ್ಚುವುದು, ಎಲ್ಲೆಂದರಲ್ಲಿ ಎಸೆಯುವುದಕ್ಕೆ ತಡೆ ಮತ್ತಿತರ ವಿಚಾರಗಳ ಗಮನಕ್ಕೆ ಆದ್ಯತೆ), ದೇಗುಲದ ಹೊರ ಆವರಣದಲ್ಲಿ (ವ್ಯಾಪಾರಿಗಳ ವರ್ತನೆ, ಸಾರ್ವಜನಿಕರು ಉಗುಳುವುದು, ಬೀಡಿ ಸಿಗರೇಟುಗಳನ್ನು ಎಸೆಯದಂತೆ ಗಮನ. ಸ್ನಾನಘಟ್ಟಗಳಲ್ಲಿ ಕಸ, ಸಾಬೂನು, ವಸ್ತ್ರಗಳನ್ನು ಎಸೆಯದಿರುವುದರ ಕುರಿತ ಜಾಗೃತಿ), ಶೌಚಾಲಯ ಸ್ವಚ್ಛತೆ ಮತ್ತು ಶೌಚಾಲಯ ನಿರ್ಮಾಣ, ನಿಷೇಧಿತ ವಲಯದಲ್ಲಿ ವಾಹನ ಪಾರ್ಕಿಂಗ್ ನಡೆಸದಂತೆ, ಧಾರ್ಮಿಕ ಕೇಂದ್ರಗಳಿಗೆ ತೆರಳುವ ಮಾರ್ಗಗಳಲ್ಲಿ ಸೂಚನಾ ಫಲಕ ಅಳವಡಿಕೆ ಇತ್ಯಾದಿ ವಿಚಾರಗಳನ್ನಿಟ್ಟುಕೊಂಡು ಸ್ವಚ್ಚ ಧಾರ್ಮಿಕ ತಾಣವನ್ನಾಗಿಸುವ ಪರಿಕಲ್ಪನೆಗಳ ಸಭೆಯಲ್ಲಿ ಬಗ್ಗೆ ಚರ್ಚೆ ನಡೆಸಲಾಯಿತು. ಧಾರ್ಮಿಕ ತಾಣಗಳ ಪರಿಸರದಲ್ಲಿರುವ ತ್ಯಾಜ್ಯವಿಲೇವಾರಿಗೆ ಪಾಲಿಕೆ ವತಿಯಿಂದ ವ್ಯವಸ್ಥೆ ಕಲ್ಪಿಸಲು ಸಚೇತಕ ಶಶಿಧರ್ ಹೆಗ್ಡೆ ಭರವಸೆ ನೀಡಿದರು. ಅಪೇಕ್ಷಿತ ಯಾವುದೇ ಧರ್ಮದ ಸ್ವಯಂಸೇವಾ ಸಂಘಟನೆಗಳು ಸಂಘಟಕರನ್ನು ಸಂಪರ್ಕಿಸಿ ಕಾರ್ಯದಲ್ಲಿ ಕೈಜೋಡಿಸಲು ಅವಕಾಶ ಕಲ್ಪಿಸುವಂತೆ ತೀರ್ಮಾನಿಸಲಾಯಿತು.
ಅಭಿಯಾನಕ್ಕೆ ಚರ್ಚ್‌ನ ಬಿಷಪರು, ಯೆನೆಪೊಯ ಸಂಸ್ಥೆ ಹಾಗು ವಿವಿಧ ಸಂಘಟನೆಗಳ ಪ್ರಮುಖರು, ಎನ್ನೆಸ್ಸೆಸ್, ಸ್ಕೌಟ್ಸ್‌ಗೈಡ್ಸ್ ಸಂಸ್ಥೆಗಳು ಕೈಜೋಡಿಸಲು ಒಲವು ತೋರಿಸಿವೆ.







