ಕೇಂದ್ರದ ನೋಟು ಅಮಾನ್ಯ ಕ್ರಮ: ನ್ಯಾ.ಸಂತೋಷ್ ಹೆಗ್ಡೆ ಸಮರ್ಥನೆ

ಉಡುಪಿ, ಡಿ.28: ಕೇಂದ್ರ ಸರಕಾರ ಇತ್ತೀಚೆಗೆ ಮಾಡಿದ ನೋಟು ಅಮಾನ್ಯ ಕ್ರಮವನ್ನು ರಾಜ್ಯದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮರ್ಥಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಸಂಜೆ ನಡೆದ ಸಮಾರಂಭದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಲವು ವರ್ಷಗಳಿಂದ ವಿವಿಧ ಸರಕಾರಗಳು ಇದರ ಬಗ್ಗೆ ಪ್ರಯತ್ನಿಸಿದ್ದರೂ ಕಾರ್ಯಗತಗೊಳಿಸಲು ಧೈರ್ಯ ಮಾಡಲಿಲ್ಲ. ಆದರೆ ಇದರಿಂದ ಬಡವರು, ಮಧ್ಯಮ ವರ್ಗದವರಿಗೆ ಕಷ್ಟವಾಗಿದೆ. ಇದು ತಾತ್ಕಾಲಿಕ ಕಷ್ಟ. ಎರಡು ವರ್ಷಗಳಲ್ಲಿ ಜಿಡಿಪಿ ಪ್ರಗತಿ ಶೇ.2ರಿಂದ 2.5 ಪ್ರಗತಿ ಸಾಧ್ಯ ಎಂದು ಆರ್ಥಿಕತಜ್ಞರು ಹೇಳುತ್ತಿದ್ದಾರೆ. ಇಷ್ಟಾಗಿ ಬ್ಯಾಂಕ್ ಅಧಿಕಾರಿಗಳು ಕೆಲವರು ಮಾಡಿದ ಭ್ರಷ್ಟಾಚಾರ ಗೊತ್ತಿದೆಯಲ್ಲ ಎಂದರು.
ರಾಜ್ಯದಲ್ಲಿ ಲೋಕಾಯುಕ್ತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಬೇಕು ಲೋಕಾಯುಕ್ತ? ಲೋಕಾಯುಕ್ತದ ಒಂದು ಬಲವನ್ನು ಎಸಿಬಿ ಮೂಲಕ ಕಿತ್ತುಕೊಂಡರು. ಈಗ ಇರುವುದು ಸ್ಪಂದಿಸುವ ಅಧಿಕಾರ ಮಾತ್ರ. ಯಾರನ್ನೇ ಆಗಲಿ ಪ್ರಾಮಾಣಿಕರು, ಜನಪರ ಕಾಳಜಿ ಇರುವವರನ್ನು ಲೋಕಾಯುಕ್ತರಾಗಿ ನೇಮಿಸಿದರೆ ಅಷ್ಟೇ ಸಾಕು ಎಂದರು.





