ಮರಳು ಸಮಸ್ಯೆ ವಿರೋಧಿಸಿ ಜ.7ರಂದು ಪ್ರತಿಭಟನೆ ನಡೆಸಲು ನಿರ್ಧಾರ

ಉಡುಪಿ, ಡಿ.28: ಜಿಲ್ಲೆಯಲ್ಲಿ ಮರಳಿನ ಅಭಾವ ಹಾಗೂ ಪಾದೆಕಲ್ಲು ಮತ್ತು ಕೆಂಪು ಕಲ್ಲು ಸಾಗಾಟದ ವಾಹನಗಳಿಗೆ ದಂಡ ವಿಧಿಸುತ್ತಿರುವ ಜಿಲ್ಲಾ ಡಳಿತ ಕ್ರಮವನ್ನು ವಿರೋಧಿಸಿ ಜ.7ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಲು ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯು ನಿರ್ಧರಿಸಿದೆ.
ಇಂದು ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಜಿಲ್ಲೆಯಲ್ಲಿ ಮರಳಿನ ಕೊರತೆಯಿಂದ ಜನ ತೊಂದರೆಗೆ ಒಳಗಾಗಿದ್ದು, ಇದೀಗ ಜಿಲ್ಲಾಧಿಕಾರಿಗಳು ಪಾದೆಕಲ್ಲು ಮತ್ತು ಕೆಂಪುಕಲ್ಲಿನ ವಾಹನಗಳನ್ನು ತಡೆದು 50,000ರೂ. ದಂಡ ವಿಧಿಸುವ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲಾಡಳಿತ ಈ ಕ್ರಮ ತೀರಾ ಖಂಡನೀಯ ಎಂದು ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ ತಿಳಿಸಿದರು.
ಈ ಎಲ್ಲ ಸಮಸ್ಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವ ರಾಜ್ ಅವರೇ ನೇರ ಹೊಣೆ. ಅಲ್ಲದೆ ಜಿಲ್ಲೆಯ ಎಲ್ಲ ಶಾಸಕರು ಕಾರಣ ಕರ್ತರಾಗಿದ್ದಾರೆ. ಇವರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಆರೋಪಿಸಿದರು. ಜಿಲ್ಲೆಯ ಜನರಿಗೆ ಮರಳು ಸಿಗಬೇಕು ಮತ್ತು ಕಾರ್ಮಿಕರಿಗೆ ಕೆಲಸ ದೊರೆ ಯಬೇಕೆಂಬುದು ನಮ್ಮ ಹೋರಾಟದ ಉದ್ದೇಶವಾಗಿದೆ. ನ್ಯಾಯ ಸಿಗುವ ವರೆಗೆ ಹೋರಾಟವನ್ನು ಮುಂದುವರೆಸಲಾಗುವುದು. 15ದಿನಗಳಲ್ಲಿ ಕರಾ ವಳಿಗೆ ಪ್ರತ್ಯೇಕ ನೀತಿ ರಚಿಸುವುದಾಗಿ ಹೇಳಿ ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ದೂರಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ಡಯಸ್, ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹ್ಮದ್, ರೈತ ಸಂಘದ ವಿಜಯ ಕುಮಾರ್ ಹೆಗ್ಡೆ, ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಸ್ ಮೊದಲಾದ ವರು ಉಪಸ್ಥಿತರಿದ್ದರು.







