ಪ್ರಧಾನಿ ಮೋದಿ ಬಗ್ಗೆ 'ಮುಲಾಯಂ' ಆದ ಎಸ್ಪಿ ನಾಯಕ ಹೇಳಿದ್ದೇನು ?

ಲಕ್ನೋ, ಡಿ. 28 : ಸಮಾಜವಾದಿ ಪಕ್ಷದ ನಾಯಕ, ಬಿಜೆಪಿಯನ್ನು ಸದಾ ಟೀಕಿಸುವ ಸೀನಿಯರ್ ಯಾದವ್ ಪ್ರಧಾನಿ ಮೋದಿ ಬಗ್ಗೆ ಇದ್ದಕ್ಕಿದ್ದಂತೆ ' ಮುಲಾಯಂ' ಆಗಿ ಬಿಟ್ಟಿದ್ದಾರೆ.
ಬುಧವಾರ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್ " ಪ್ರಧಾನಿ ಅವರು ಬಹಳ ಕಷ್ಟಗಳನ್ನು ಎದುರಿಸಿ ಇಲ್ಲಿವರೆಗೆ ಬಂದಿದ್ದಾರೆ. ಅವರು ಸಾಧಾರಣ ಕುಟುಂಬದಿಂದ ಬಂದವರು. ಆದರೆ ಬಿಜೆಪಿ ತಾನು ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ " ಎಂದು ಹೇಳಿಬಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಪಕ್ಷದ 325 ಅಭ್ಯರ್ಥಿಗಳ ಪಟ್ಟಿಯನ್ನೂ ಮುಲಾಯಂ ಬಿಡುಗಡೆ ಮಾಡಿದರು. ಉಳಿದ 78 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ ಮುಲಾಯಂ ಚುನಾವಣೆಯಲ್ಲಿ ಎಸ್ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಪಿ ಟಿಕೆಟ್ ಗಾಗಿ 4200 ಮಂದಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದ ಮುಲಾಯಂ ಉತ್ತರ ಪ್ರದೇಶ ಗೆದ್ದವರೇ ದಿಲ್ಲಿ ಗೆಲ್ಲುತ್ತಾರೆ. ಈ ಚುನಾವಣೆ ನಿಮ್ಮದೇ. ಇದು ಫೆಬ್ರವರಿ 28 ಕ್ಕೆ ಮೊದಲು ನಡೆಯುತ್ತದೆ ಎಂದು ಕಾರ್ಯಕರ್ತರಿಗೆ ನೆನಪಿಸಿದರು.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. " ಅವರು ಇಚ್ಛಿಸಿದಲ್ಲಿಂದ ಅವರು ಸ್ಪರ್ಧಿಸುತ್ತಾರೆ " ಎಂದು ಮುಲಾಯಂ ಹೇಳಿದ್ದಾರೆ. ತನ್ನ 176 ಶಾಸಕರಿಗೆ ಎಸ್ಪಿ ಮತ್ತೆ ಟಿಕೆಟ್ ನೀಡಿದೆ.







