ಮಂಗಳೂರು : ಪಡಿತರ ಕಾರ್ಡುದಾರರಿಗೆ ಜನವರಿಯಿಂದ ಸೂರ್ಯಕಾಂತಿ ಎಣ್ಣೆ
ಮಂಗಳೂರು, ಡಿ.28: ಸಾರ್ವಜನಿಕ ವಿತರಣೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ಕಾರ್ಡಿಗೆ 1 ಲೀಟರ್‌ನಂತೆ ತಾಳೆಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ಪ್ರದೇಶದಲ್ಲಿ ತಾಳೆಎಣ್ಣೆಯನ್ನು ಖಾದ್ಯತೈಲವಾಗಿ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತಿರುವುದು ಸರಕಾರದ ಗಮನಕ್ಕೆ ಬಂದ ಕಾರಣ ಸಾಮಾನ್ಯವಾಗಿ ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಖಾದ್ಯತೈಲವನ್ನಾಗಿ ಉಪಯೋಗಿಸುತ್ತಿರುವುದರಿಂದ ಪ್ರಾಯೋಗಿಕವಾಗಿ ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಎವೈ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ಕಾರ್ಡಿಗೆ 1 ಲೀಟರ್‌ನಂತೆ ತಾಳೆಎಣ್ಣೆ ಬದಲಾಗಿ ಸೂರ್ಯಕಾಂತಿ ಎಣ್ಣೆಯನ್ನು ಲೀಟರಿಗೆ ರೂ. 40ರಂತೆ ಜನವರಿ 2017ನೆ ಮಾಹೆಯಿಂದ ನೀಡಲಾಗುವುದು.
ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳಿಂದ ಯಾವುದೇ ಕಾರಣಕ್ಕೂ ತಾಳೆಎಣ್ಣೆಯನ್ನು ಪಡೆದುಕೊಳ್ಳಬಾರದು. ಒಂದು ವೇಳೆ ಸೂರ್ಯಕಾಂತಿ ಎಣ್ಣೆ ಬದಲಿಗೆ ತಾಳೆಎಣ್ಣೆಯನ್ನು ನೀಡಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿದಾರರ ವಿರುದ್ಧ ದೂರನ್ನು ಸಂಬಂಧಪಟ್ಟ ತಹಶೀಲ್ದಾರರು ಅಥವಾ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂಗಳೂರು ಅವರಿಗೆ ನೀಡಬೇಕು. ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







