ಜ.1ರಿಂದ ವಿಮಾನ ನಿಲ್ದಾಣದ ನೌಕರರಿಗೆ ಆಧಾರ್ ಆಧಾರಿತ ಪಾಸ್
ಹೊಸದಿಲ್ಲಿ, ಡಿ.28: ಜನವರಿ 1ರಿಂದ, ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರು, ಪ್ರವೇಶ ಹಾಗೂ ನಿರ್ಗಮನಕ್ಕೆ ಉಪಯೋಗಿಸುವ ಕಡ್ಡಾಯ ವಿಮಾನ ನಿಲ್ದಾಣ ಪ್ರವೇಶ ಪಾಸ್‌ಗಳಿಗಾಗಿ(ಎಇಪಿ) ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.
ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ಸಿಐಎಸ್‌ಎಫ್ ಜ.1ರಿಂದ ಈ ಕ್ರಮವನ್ನು ಅನುಷ್ಠಾನಗೊಳಿಸಲಿದೆ. ಈ ಸಂಬಂಧ ಅದು ಮಾಡಿದ ಮನವಿಯನ್ವಯ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ(ಬಿಸಿಎಎಸ್) ಆದೇಶವೊಂದರಲ್ಲಿ ಹೊರಡಿಸಿದೆ.
ಜ.1ರ ಬಳಿಕ, ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಅಥವಾ ನೇಮಿಸಲಾಗಿರುವ ಪ್ರತಿಯೊಬ್ಬನಿಗೂ ಆಧಾರ್ ಸಂಖ್ಯೆಯನ್ನುಪಯೋಗಿಸಿ ಎಇಪಿಗಳನ್ನು ಮಾಡಲಾಗುವುದು. ಇಂತಹ ಪಾಸ್‌ಗಳನ್ನು ಆಧಾರ್ ಸಂಖ್ಯೆ ಉಪಯೋಗಿಸಿಯೇ ಮಾಡಬೇಕೆಂದು ಈ ಸಂಬಂಧ ರಚಿಸಲಾಗಿರುವ ಸಮಿತಿಯೊಂದು ಕಡ್ಡಾಯಗೊಳಿಸಿದೆ.
ಈಗಿನ ಹಳೆಯ ಪಾಸ್‌ಗಳ ಅವಧಿಯನ್ನು ಮಾ.31ರ ವರೆಗೆ ವಿಸ್ತರಿಸಲಾಗಿದೆಯೆಂದು ಸಿಐಎಸ್‌ಎಫ್‌ನ ಮಹಾ ನಿರ್ದೇಶಕ ಒ.ಪಿ. ಸಿಂಗ್ ತಿಳಿಸಿದ್ದಾರೆ.
Next Story





