ಪ್ರಧಾನಿ ಭೀತಿ ರಾಜಕೀಯ ನಡೆಸುತ್ತಿದ್ದಾರೆ: ರಾಹುಲ್
ಹೊಸದಿಲ್ಲಿ, ಡಿ.28: ನೋಟು ರದ್ದತಿಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಂದು ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅವರು ‘ಭಯ ಹಾಗೂ ಸಿಟ್ಟಿನ’ ರಾಜಕೀಯ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಪ್ರಧಾನಿಯ ಈ ಸಿದ್ಧಾಂತವನ್ನು ಸೋಲಿಸುವಂತೆ ಅವರು ಸ್ವಪಕ್ಷೀಯರಿಗೆ ಕರೆ ನೀಡಿದ್ದಾರೆ.
ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ತಾನು ಯಜ್ಞವೊಂದನ್ನು ನಡೆಸುತ್ತಿದ್ದೇನೆಂದು ನ.8ರಂದು ಮೋದಿಜಿ ಹೇಳಿದ್ದರು. ಪ್ರತಿ ಯಜ್ಞದಲ್ಲಿ ಯಾರಾದರೊಬ್ಬನನ್ನು ಬಲಿ ನೀಡಲಾಗುತ್ತದೆ ಹಾಗೂ ಪ್ರತಿ ಯಜ್ಞವನ್ನು ಯಾರಾದರೊಬ್ಬನ ಲಾಭಕ್ಕಾಗಿ ಮಾಡಲಾಗುತ್ತದೆ. ನೋಟು ರದ್ದತಿ ಯಜ್ಞವನ್ನು ದೇಶದ ಶೇ.1ರಷ್ಟಿರುವ ಭಾರೀ ಶ್ರೀಮಂತರ 50 ಕುಟುಂಬಗಳಿಗಾಗಿ ಮಾಡಲಾಗಿದೆ. ಬಡವರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಹಾಗೂ ಸಣ್ಣ ವ್ಯಾಪಾರಿಗಳು ಈ ಯಜ್ಞಕ್ಕೆ ಬಲಿಯಾಗಿದ್ದಾರೆ. ಅದರಿಂದ ಭಾರೀ ನೋವು ಉಂಟಾಗಿದೆಯೆಂದು ಕಾಂಗ್ರೆಸ್ ಪಕ್ಷದ 132ನೆ ಸ್ಥಾಪನಾ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಹುಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಬಡವರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು ಹಾಗೂ ದೇಶದ ಪರ ನಿಲ್ಲುತ್ತದೆ ಮತ್ತು ಅವರಿಗೆ ಸಹಾಯ ಮಾಡಲಿದೆ ಎಂದ ಅವರು, ನೋಟು ರದ್ದತಿಯಿಂದ ನೊಂದವರನ್ನು ತಲುಪುವಂತೆ ಹಾಗೂ ಭಯ ಮತ್ತು ದ್ವೇಷ ಹರಡುವ, ಮೋದಿ ಹಾಗೂ ಆರೆಸ್ಸೆಸ್‌ನ ಸಿದ್ಧಾಂತವನ್ನು ಸೋಲಿಸುವಂತೆ ಕಾಂಗ್ರೆಸಿಗರಿಗೆ ಕರೆ ನೀಡಿದ್ದಾರೆ.
ಮೋದಿ ದೇಶದ ಜನರ ಆರ್ಥಿಕ ಸ್ವಾತಂತ್ರವನ್ನು ಘಾಸಿಗೊಳಿಸಿದ್ದಾರೆಂದು ಆರೋಪಿಸಿದ ರಾಹುಲ್, ಹಣ ಹಿಂದೆಗೆತಕ್ಕೆ ರೂ.24 ಸಾವಿರದ ಮಿತಿಯನ್ನು ಯಾವ ಆಧಾರದ ಮೇಲೆ ಹೇರಲಾಗಿದೆಯೆಂದು ಪ್ರಶ್ನಿಸಿದ್ದಾರೆ.





