ಸರಕಾರಿ ಶಾಲೆಯ ನೂತನ ಕಟ್ಟಡ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ

ಬಂಟ್ವಾಳ, ಡಿ. 28: ಖಾಸಗಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ರ್ಯಾಂಕ್ ಗಳಿಕೆಯನ್ನಷ್ಟೇ ಉದ್ದೇಶವನ್ನಾಗುಟ್ಟುಕೊಂಡು ಟ್ಯುಷನ್ ಮತ್ತು ಟೆನ್ಷನ್‌ನೊಂದಿಗೆ ಬೆಳೆಯುತ್ತಾರೆ. ಆದರೆ ಸರಕಾರಿ ಶಾಲೆಯ ಮಕ್ಕಳು ಸೃಜನ ಶೀಲತೆ ಹಾಗೂ ಆತ್ಮಸ್ಥೈರ್ಯದ ಜಾಗೃತಿಯೊಂದಿಗೆ ಬೆಳೆಯುತ್ತಾರೆ. ಆತ್ಮಸೈರ್ಯ ವೃದ್ಧಿಯಾಗದೆ ಕೇವಲ ಜ್ಞಾನ ವೃದ್ಧಿಯಾದರೆ ಪ್ರಯೋಜನವಿಲ್ಲ ಎಂದು ಸಂಸದ ನಳೀನ್ ಕುಮಾರ್ ಕಟೀಲು ಹೇಳಿದರು.
ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಯೋಜನೆಯಡಿ ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿ ಕಲಿತರೆ ಉನ್ನತ ಮಟ್ಟಕ್ಕೇರಲು ಸಾಧ್ಯ ಎನ್ನುವ ಪೋಷಕರ ಮಾನಸಿಕತೆಯೇ ಇಂದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣವಾಗಿದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಖ್ಯಾತ ವಿಜ್ಞಾನಿ ಸರ್.ಎಂ.ವಿಶ್ವೇಶ್ವರಯ್ಯ ಸರಕಾರಿ ಶಾಲೆಗಳಲ್ಲಿ ಕಲಿತು ಸಾಧನೆ ಮಾಡಿದವರು. ಸರಕಾರಿ ಶಾಲೆಗಳಲ್ಲಿನ ಮಕ್ಕಳು ಸಾಧಕರಾಗಿದ್ದಾರೆ ಎನ್ನುವ ಪೋಷಕರ ಮರೆವು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹಕ್ಕೆ ಕಾರಣವಾಗಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಹಿತಿ ಜ್ಞಾನವನ್ನಷ್ಟೇ ನೀಡುತ್ತದೆ. ಸರಕಾರಿ ಶಾಲೆಗಳು ಅನುಭವದೊಂದಿಗೆ ಸಾಮಾಜಿಕ ಜವಬ್ದಾರಿಯನ್ನು ನೀಡುತ್ತದೆ. ಸರಕಾರಿ ಶಾಲೆಗಳಲ್ಲಿ ಪರಿಣಿತ ಹಾಗೂ ತರಬೇತಿ ಪಡೆದ ಶಿಕ್ಷರಿರುವುದೇ ಇದಕ್ಕೆ ಕಾರಣ. ಇಲ್ಲಿ ವಿದ್ಯಾರ್ಥಿಗಳಿಗೆ ಬಡತನದ ನೋವು ನಲಿವುಗಳ ಅರಿವಿರುತ್ತದೆ, ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಸೃಜನಶೀಲ ಪ್ರತಿಭೆಗಳು ಸರಕಾರಿ ಶಾಲೆಗಳಲ್ಲಿ ಅರಳುತ್ತದೆ ಎಂದರು.
ಎ. 29, 30ರಂದು ಲೋಕಾರ್ಪಣೆ:
ದುರ್ಗ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ ಎ. 29 ಹಾಗೂ ಎ. 30ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು. ಕ್ಲಬ್‌ನ ಸದಸ್ಯರ ಆಶಯದಂತೆ ಕೇಂದ್ರ ಶಿಕ್ಷಣ ಸಚಿವರನ್ನು ಕರೆ ತರುವ ಪ್ರಯತ್ನ ಮಾಡುತ್ತೇನೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿರುವುದಾಗಿ ಅವರು ತಿಳಿಸಿದರು.
ಪುಣ್ಯದ ಕಾರ್ಯ:
ಯುವಕ ಸಂಘವೊಂದು ಶಾಲೆಯನ್ನು ದತ್ತು ಸ್ವೀಕರಿಸಿ ನೂತನ ಕಟ್ಟಡವನ್ನು ನಿರ್ಮಿಸಿ ಕೊಡುತ್ತಿರುವುದು ಮಾದರಿ ಕಾರ್ಯ. ಈ ಮೂಲಕ ಕ್ಲಬ್ ಸರಕಾರದ ಕಣ್ತೆರೆಸುವ ಕೆಲಸ ಮಾಡಿದೆ. ಒಂದು ಶಾಲೆ ನಿರ್ಮಿಸಿದರೆ ಸಾವಿರ ದೇವಸ್ಥಾನಗಳನ್ನು ನಿರ್ಮಿಸಿದ ಪುಣ್ಯ ಸಿಗುತ್ತದೆ. ಜಿಲ್ಲೆಯ ಮಾದರಿ ಶಾಲೆ ಯಾವುದೆಂದರೆ ದಡ್ಡಲಕಾಡು ಎನ್ನುವ ರೀತಿಯಲ್ಲಿ ಶಾಲೆ ಅಭಿವೃದ್ಧಿಗೊಳುತ್ತಿರುವುದು ಅಭಿನಂದನೀಯ. ತನ್ನ ಸಂಸದ ನಿಧಿಯಿಂದ 5 ಲಕ್ಷ ರುಪಾಯಿ ಅನುದಾನ ನೀಡುವುದಾಗಿ ಅವರು ಘೋಷಿಸಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿಪಂ ಸದಸ್ಯ ತುಂಗಪ್ಪ ಬಂಗೇರಾ ಮಾತನಾಡಿದರು. ಗ್ರಾಪಂ ಸದಸ್ಯ ಪೂವಪ್ಪ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಸಂಜೀವ ಪೂಜಾರಿ, ಲಕ್ಷ್ಮೀನಾರಾಯಣ, ರೂಪಶ್ರೀ, ಆಕಾಶವಾಣಿ ಕಲಾವಿದೆ ಮಲ್ಲಿಕಾ, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಗೌಡ ಉಪಸ್ಥಿತರಿದ್ದರು.







