ಪಜೀರ್: ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ
ಕೊಣಾಜೆ, ಡಿ.28: ಮನುಷ್ಯ ಆರೋಗ್ಯವಂತ ನಾಗಿರಬೇಕಿದ್ದರೆ ನಾವು ಸೇವಿಸುವ ಆಹಾರ ಹಿತಮಿತವಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರ ಎಳೆಯ ಮಕ್ಕಳಿಗೆ ಪೋಷಕಾಂಶದಿಂದ ಕೂಡಿದ ಆಹಾರ ಸಿಗಬೇಕೆನ್ನುವ ಕಾರಣಕ್ಕೆ ಹಾಲು, ಮೊಟ್ಟೆ, ದ್ವಿದಳ ಧಾನ್ಯ ಹಾಗೂ ಇತರ ಆಹಾರಗಳನ್ನು ನೀಡುತ್ತಿದೆ. ಆದರೆ ಪೋಷಕರು ಅದನ್ನು ಸದುಪಯೋಗಪಡಿಸಿಕೊಳ್ಳದಿರುವುದು ಖೇದಕರ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಪಜೀರು ಗ್ರಾಪಂ ಕಚೇರಿ ಮುಂಭಾಗದಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕಟ್ಟಡವನ್ನು ಬುಧವಾರ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 10ರಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಯಾವುದೇ ವಾಣಿಜ್ಯ ಸಂರ್ಕೀಣಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಅದರ ಮಾಲಕನಿಗೆ ಕಷ್ಟವಾಗದು. ಕಟ್ಟಡಕ್ಕೆ ಪರವಾನಿಗೆ ನೀಡುವ ಸಂದರ್ಭ ಮಾಲಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಗ್ರಾಪಂ ಪಿಡಿಒಗಳಿಗೆ ಸಚಿವರು ಸೂಚಿಸಿದರು. ಅಂಗನವಾಡಿ ಮೇಲ್ವಿಚಾರಕಿ ಮಲ್ಲಿಕಾ ಮಾತನಾಡಿದರು.
ಜಿಪಂ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ನವೀನ್ ಪಾದಲ್ಪಾಡಿ, ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷೆ ಜ್ಯೋತಿ, ಮನಪಾ ಕಾರ್ಪೊರೇಟರ್ ಲತೀಫ್ ಕಂದಕ್, ತಾಪಂ ಮಾಜಿ ಸದಸ್ಯ ಉಮರ್ ಪಜೀರು, ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ್ ಕಾಜವ, ಪ್ರ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟೆಪದವು, ನಾಸಿರ್ ನಡುಪದವು, ಹಿರಿಯ ಅಭಿಯಂತರ ರವಿಶಂಕರ್, ಕೆಡಿಬಿ ಸದಸ್ಯ ಪದ್ಮನಾಭ ನರಿಂಗಾನ, ಪಜೀರು ಗ್ರಾಪಂ ಮಾಜಿ ಅಧ್ಯಕ್ಷರಾದ ಇಮ್ತಿಯಾಝ್, ನಝೀರ್ ಮೊಯ್ದಿನ್, ಪ್ಲೋರಿನ್ ಡಿಸೋಜ ಹಾಗೂ ಸಮೀರ್ ಪಜೀರ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಪಿಡಿಒ ಶೃತಿ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಸಿಂಧೂ ಕಾರ್ಯಕ್ರಮ ನಿರೂಪಿಸಿದರು.









