ನಗರದ ವಾಯು ಮಾಲಿನ್ಯ ಅಧ್ಯಯನ ಎಪಿಡಿ ಪ್ರತಿಷ್ಠಾನದ ಯೋಜನೆಗೆ ಶಾಸಕ ಲೋಬೊ ಶ್ಲಾಘನೆ

ಮಂಗಳೂರು, ಡಿ.28 : ಆಂಟಿ ಪೊಲ್ಯುಷನ್ ಡ್ರೈವ್ ಪ್ರತಿಷ್ಠಾನದ ವತಿಯಿಂದ ಕೈಗೊಳ್ಳಲಾದ ಮಂಗಳೂರು ನಗರದ ಗಾಳಿ ಗುಣಮಟ್ಟ ಅಥವ ಮಾಲಿನ್ಯದ ಪ್ರಮಾಣ ಅಧ್ಯಯನ ಸಮಾಪ್ತಿಗೊಂಡಿದ್ದು, ಇನ್ನೆರಡು ವಾರದಲ್ಲಿ ವಾಯು ಮಾಲಿನ್ಯದ ಪ್ರಮಾಣದ ವಿಸ್ತ್ರತ ವರದಿ ಪ್ರಕಟವಾಗಲಿದೆ. ಎಪಿಡಿ ಪ್ರತಿಷ್ಠಾನ ಕೈಗೊಂಡಿರುವ ಯೋಜನೆಯನ್ನು ಸ್ಥಳೀಯ ಶಾಸಕ ಜೆ. ಆರ್. ಲೋಬೊ ಪ್ರಶಂಸಿಸಿದ್ದು, ನಗರದ ನಂತೂರು ವೃತ್ತದ ರಾಷ್ಟ್ರೀಯ ಹೆದ್ದಾರಿ ಸಮೀಪ ಕೈಗೊಳ್ಳಲಾದ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಪರಿಶೀಲನೆ ನಡೆಸಿದರು.
ಸರಕಾರದಿಂದ ಮಾನ್ಯತೆ ಪಡೆದಿರುವ ವನ್ ಅರ್ಥ್ ಲ್ಯಾಬ್ಸ್ ಸಂಸ್ಥೆಯು ನಗರದ ಹದಿನೈದಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯು ಗುಣಮಟ್ಟದ ತಪಾಸಣೆ ನಡೆಸಿದ್ದು, ಸಂಸ್ಥೆಯ ಗುಣಮಟ್ಟ ಅಧಿಕಾರಿ ಮುಳೀಧರ ಎಸ್ ಮಲ್ಯ ಅವರ ನೇತೃತ್ವದಲ್ಲಿ ಮಾಹಿತಿಯ ವಿಶ್ಲೇಷಣೆ ನಡೆಸಿ ವರದಿ ನೀಡಲಿದೆ. ನಗರದ ಸೈಂಟ್ ಜಾರ್ಜ್ಸ್ ಹೊಮಿಯೋಪತಿ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿದೆ.
ನಗರದ ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೆಲ್ ಸರ್ಕಲ್, ಬಂದರ್, ಕೇಂದ್ರ ಮಾರುಕಟ್ಟೆ, ಲಾಲ್ ಭಾಗ್, ಬಿಜೈ, ಕದ್ರಿ ಕೆಪಿಟಿ, ನಂತೂರು, ಪಂಪ್ ವೆಲ್, ಕಂಕನಾಡಿ, ಅತ್ತಾವರ ರೈಲ್ವೇ ಸ್ಟೇಶನ್, ಪಿಲಿಕುಳ ನಿಸರ್ಗಧಾಮ, ತಣ್ಣೀರುಬಾವಿ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶ ಮುಂತಾದೆಡೆ ವಾಯು ಮಾಲಿನ್ಯದ ಮಾಹಿತಿಯನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಲೆ ಹಾಕಲಾಗಿದೆ.
ರಾಜಧಾನಿ ನವದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣದ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ದೇಶದ 94 ನಗರಗಳು ವಾಯು ಗುಣಮಟ್ಟವನ್ನು ಕಾಪಾಡುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಎಪಿಡಿ ಪ್ರತಿಷ್ಠಾನವು ನಗರದಲ್ಲಿ ಇಂತಹ ಕಾರ್ಯಕ್ರಮಕ್ಕೆ ಮಾದಲ ಬಾರಿ ಕೈಗೊಂಡಿದೆ ಎನ್ನುತ್ತಾರೆ ಎಪಿಡಿ ಸಂಸ್ಥಾಪಕ ಅಬ್ದುಲ್ಲ ಎ.ರೆಹಮಾನ್.
ಸರಕಾರದ ವತಿಯಿಂದ ಬೈಕಂಪಾಡಿಯಲ್ಲಿ ವಾಯು ಗುಣಮಟ್ಟ ಅಳಕೆ ಮಾಪಕವನ್ನು ಕೈಗಾರಿಕಾ ಪ್ರದೇಶ ಬೈಕಂಪಾಡಿಯಲ್ಲಿ ಇರಿಸಲಾಗಿದೆ. ಆದರೆ, ಮಂಗಳೂರು ನಗರದ ವಸತಿ, ಕಚೇರಿ ಮತ್ತು ಪ್ರವಾಸೋದ್ಯಮ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣದ ಮಾಹಿತಿ ಸಂಗ್ರಹ ಇದರಿಂದ ಸಾಧ್ಯವಾಗುವುದಿಲ್ಲ. ಎಪಿಡಿ ಯೋಜನೆಯಿಂದ ನಗರ ಪ್ರದೇಶದಲ್ಲಿ ತಪಾಸಣೆ ಮಾಡಲಾಗಿದ್ದು, ಇನ್ನೆರಡು ವಾರಗಳಲ್ಲಿ ಅಧ್ಯಯನ ವರದಿಯನ್ನು ಸರಕಾರಕ್ಕೆ ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.







