ದನ ಮೇಯುವ ವಿಷಯದಲ್ಲಿ ದಲಿತ, ಗರ್ಭಿಣಿ ಪತ್ನಿಗೆ ಹಲ್ಲೆ
ಗುಜರಾತ್‌ನಲ್ಲಿ ಇನ್ನೊಂದು ಉನಾ?

ಗಾಂಧಿನಗರ, ಡಿ.29: ಉನಾ ಘಟನೆಯ ನೆನಪು ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಅಮಾನವೀಯ ಘಟನೆ ಗಿರ್ ಸೋಮನಾಥ್ ಜಿಲ್ಲೆಯ ಉಗಾಲ ಗ್ರಾಮದಲ್ಲಿ ನಡೆದಿದೆ. ದನ ಮೇಯುವ ವಿಚಾರದಲ್ಲಿ ತಗಾದೆ ತೆಗೆದು ದಲಿತ ವ್ಯಕ್ತಿ ಹಾಗೂ ಗರ್ಭಿಣಿ ಪತ್ನಿಗೆ ಅಮಾನವೀಯವಾಗಿ ಥಳಿಸಲಾಗಿದೆ.
ದಲಿತ ದಂಪತಿ ಕೂಲಿ ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ ಹಸುಗಳನ್ನು ಮೇಯಿಸಬಾರದು ಎಂದು ಮಾಲಕನ ಕಡೆಯವರು ಸೂಚನೆ ನೀಡಿದ್ದಲ್ಲದೇ, ಹೀಗೆ ದನ ಮೇಯುತ್ತಿದ್ದ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಕ್ರಿಸ್‌ಮಸ್ ದಿನ ನಡೆದಿದ್ದು, ಬಾಬುಭಾಯ್ ಸಂಖತ್ (35) ಹಾಗೂ ಆರು ತಿಂಗಳ ಗರ್ಭಿಣಿ ಪತ್ನಿ ರೇಖಾಬೆನ್ (30) ಅವರನ್ನು ಥಳಿಸಲಾಗಿದೆ. ಹತ್ತಿಯ ಹೊಲದಲ್ಲಿ ಕೆಲಸಕ್ಕಾಗಿ ಇಬ್ಬರನ್ನೂ ಮಾಲಕ ನಿಯೋಜಿಸಿಕೊಂಡಿದ್ದ. ಡಿಸೆಂಬರ್ 25ರಂದು ಒಂದು ಸಮುದಾಯದ ಕೆಲ ಮಂದಿ ಈ ಹೊಲದಲ್ಲಿ ದನ ಮೇಯಿಸುವ ಬಗ್ಗೆ ಆಕ್ಷೇಪ ಎತ್ತಿ, ದೊಣ್ಣೆಯಿಂದ ದಂಪತಿಯನ್ನು ಹೊಡೆದರು. ದನ ಮೇಯಿಸುವುದರಿಂದ ಹತ್ತಿ ಬೆಳೆ ಹಾಳಾಗುತ್ತದೆ ಎಂದು ಜಗಳ ತೆಗೆದರು. ಇಬ್ಬರನ್ನೂ ಚಿಕಿತ್ಸೆಗಾಗಿ ವೆರವಲ್ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಜುನಾಗಡಕ್ಕೆ ಒಯ್ಯಲಾಯಿತು. ಗಿರ್- ಗದಾಢ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ.





