ಲ್ಯಾಂಡ್‌ಲೈನ್ ಫೋನ್‌ಗಳ ಜಮಾನ ಇನ್ನಿಲ್ಲ ಎನ್ನುವವರು ಇದನ್ನು ಓದಿ

ಬೆಂಗಳೂರು, ಡಿ.29: ಭಾರತ ಮಂಗಳ ಹಾಗೂ ಚಂದ್ರನಿಗೆ ಉಪಗ್ರಹಗಳನ್ನು ಯಶಸ್ವಿಯಾಗಿ ಕಳುಹಿಸಿದ್ದು, ಡಿಜಿಟಲ್ ಯುಗಕ್ಕೆ ಅಡಿ ಇಟ್ಟಿದೆ. ಆದರೆ ಇನ್ನೂ 12 ಸಾವಿರ ಮಂದಿ ಭಾರತ ಸಂಚಾರ ನಿಗಮದ ಲ್ಯಾಂಡ್‌ಲೈನ್ ಫೋನ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ!
ಟೆಲಿಕಾಂ ಕಾರ್ಯದರ್ಶಿಯಾಗಿದ್ದ ಎನ್.ವಿಠಲ್ ಅವರು, ಬಿಎಸ್‌ಎನ್‌ಎಲ್ ವತಿಯಿಂದ ಬೇಡಿಕೆಗೆ ಅನುಗುಣವಾಗಿ ತಕ್ಷಣ ಸಂಪರ್ಕ ನೀಡಲಾಗುವುದು ಎಂದು ಹೇಳಿಕೆ ನೀಡಿದ 23 ವರ್ಷಗಳ ಬಳಿಕವೂ ಈ ಸ್ಥಿತಿ ಇದೆ. ಈ ಕಾಯುವಿಕೆ ಪಟ್ಟಿಗೆ ಮುಖ್ಯ ಕಾರಣಗಳು ಎರಡು. ಮೊದಲನೆಯದಾಗಿ ಹಲವು ಪ್ರದೇಶಗಳು ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಹಾಗೂ ಎರಡನೆಯದಾಗಿ ಭೂಗತ ಕೇಬಲ್‌ಗಳ ಲಭ್ಯತೆ ಇಲ್ಲದಿರುವುದು ಇನ್ನೊಂದು ಕಾರಣ.
ಆದರೆ ಇದು ಕೇವಲ ಸಬೂಬು ಎನ್ನುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಬಾಕಿ ಇರುವ ಸಂಪರ್ಕಗಳ ಪೈಕಿ ಶೇ.84ರಷ್ಟು ಅಂದರೆ 10459 ನಗರ ಪ್ರದೇಶದ ಅರ್ಜಿಗಳು. ಜತೆಗೆ ಇವು ಭಯೋತ್ಪಾದನಾ ಚಟುವಟಿಕೆಗಳಿಂದ ಪೀಡಿತವಾಗಿರುವ ಜಮ್ಮುಕಾಶ್ಮೀರ ಅಥವಾ ಈಶಾನ್ಯ ರಾಜ್ಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ರಾಜಸ್ಥಾನ ವೃತ್ತಗಳಲ್ಲಿ ಬಾಕಿ ಇರುವ ಅರ್ಜಿಗಳು ಇವು.





