ಇಲ್ಲಿ ಬಸ್ಸಿನಲ್ಲಿ ಖಾಲಿ ಸೀಟಿದ್ದರೂ ಕುಳಿತುಕೊಳ್ಳುವಂತಿಲ್ಲ!
ಕಾರಣವೇನು ಗೊತ್ತೇ?

ಆಗ್ರಾ, ಡಿ.29: ಇದು ಉತ್ತರ ಪ್ರದೇಶದ ವಿಚಿತ್ರ ಸಂಗತಿ. ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಖಾಲಿ ಸೀಟಿದ್ದರೂ ನೀವು ಕೂರುವಂತಿಲ್ಲ. ಏಕೆ ಎಂಬ ಕುತೂಹಲವೇ?
ಇಂಥದ್ದೇ ಕುತೂಹಲ ದಿವ್ಯಕುಮಾರಿ (22) ಎಂಬ ಕಾಲೇಜು ಯುವತಿಗೂ ಬಂತು. ಆಗ್ರಾದಿಂದ ಕಾಸಗಂಜ್‌ನಲ್ಲಿರುವ ಕಾಲೇಜಿಗೆ ತೆರಳಲು ಬಸ್ಸೇರಿದಳು. ಬಸ್ಸಿನಲ್ಲಿ ಎರಡು ಆಸನಗಳು ಖಾಲಿ ಇರುವುದು ಗಮನಿಸಿದಳು. ಪಕ್ಕದಲ್ಲಿದ್ದ ಪ್ರಯಾಣಿಕರನ್ನು ಕುರಿತು, ನಾನು ಕೂರಬಹುದೇ ಎಂದು ಕೇಳಿದಳು. "ಇಲ್ಲ" ಎಂಬ ಉತ್ತರ ಆ ದಂಪತಿಯಿಂದ ಬಂತು. "ಏಕೆ" ಎಂಬ ಪ್ರಶ್ನೆಗೆ ದೊರಕಿದ ಉತ್ತರ, "ನಾವು ಆ ಸೀಟಿಗೆ ಟಿಕೆಟ್ ಖರೀದಿಸಿದ್ದೇವೆ"
ಇಲ್ಲದವರಿಗಾಗಿ ಏಕೆ ಟಿಕೆಟ್ ಎಂಬ ಕುತೂಹಲ ಮತ್ತಷ್ಟು ಹೆಚ್ಚಿ ಪ್ರಶ್ನಿಸಿದಾಗ ತಿಳಿದು ಬಂದದ್ದು ಇಷ್ಟು. ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಜತೆ ಗಡಿ ಹಂಚಿಕೊಳ್ಳುವ ಈ ಪ್ರದೇಶದಲ್ಲಿ ಜನ, ತಮ್ಮ ಸಂಬಂಧಿಕರ ಅಥವಾ ಸ್ನೇಹಿತರ ಅಂತ್ಯಸಂಸ್ಕಾರಕ್ಕೆ ತೆರಳುವಾಗ, "ಮೃತ ವ್ಯಕ್ತಿ"ಗಳಿಗಾಗಿ ಕೂಡಾ ಟಿಕೆಟ್ ಖರೀದಿಸಿ ಇಡುತ್ತಾರೆ. ಇದು ಇಲ್ಲಿನ ರೂಢಿ ಎಂಬ ಅಚ್ಚರಿಯ ಅಂಶ.
ಈ ದಂಪತಿ ಕಾಸಗಂಜ್‌ನ ಸರೋನ್ ಪ್ರದೇಶಕ್ಕೆ ಅಸ್ಥಿ ವಿಸರ್ಜನೆಗಾಗಿ ತೆರಳುತ್ತಿದ್ದರು. ಈ ರಾಜ್ಯಗಳ ಹಲವು ಕಡೆಗಳಲ್ಲಿ ಈ ಪದ್ಧತಿ ಇದೆ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ವಿವರಿಸಿದರು. ಅಸ್ಥಿ ವಿಸರ್ಜನೆಗೆ ತೆರಳುವ ವೇಳೆ, ಮೃತ ವ್ಯಕ್ತಿಗಳು ಕೂಡಾ ಸಂಬಂಧಿಕರ ಜತೆಗೆ ಪ್ರಯಾಣಿಸುತ್ತಾರೆ ಎಂಬ ನಂಬಿಕೆಯಿಂದ ಜನ, ಅವರಿಗಾಗಿಯೂ ಟಿಕೆಟ್ ಖರೀದಿಸುವುದು ಇಲ್ಲಿ ಸಾಮಾನ್ಯ ಎಂದು ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್‌ಕುಮಾರ್ ಶರ್ಮಾ ವಿವರಿಸಿದ್ದಾರೆ.







