ಎಲ್ಲರಿಗೂ ಖುಷಿ ಕೊಟ್ಟ ದಂಗಲ್ ಪಿ. ಆರ್. ಸೋಂಧಿಗೆ ಮಾತ್ರ ಬೇಸರತಂದಿದ್ದು ಏಕೆ ?
ಸೂಪರ್ ಹಿಟ್ ಗೆ ಮೊದಲ ಅಪಸ್ವರ

ಮುಂಬೈ, ಡಿ.29: ಆಮಿರ್ ಖಾನ್ ಅವರ ದಂಗಲ್ ಚಿತ್ರಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆಯ ಮಹಾಪೂರಗಳೇ ಹರಿದು ಬರುತ್ತಿದ್ದರೂ ಒಬ್ಬರಿಗೆ ಮಾತ್ರ ಬೇಸರ ತಂದಿದೆ. ಅವರೇ ಮಾಜಿ ಕುಸ್ತಿ ಕೋಚ್ ಪಿ ಆರ್ ಸೋಂಧಿ. ದಂಗಲ್ ನಲ್ಲಿ ತಮ್ಮ ಪಾತ್ರವನ್ನು ಬಿಂಬಿಸಿದ ರೀತಿಯಿಂದ ಅವರಿಗೆ ಅಸಮಾಧಾನವುಂಟಾಗಿದೆ.
ದಂಗಲ್ ಚಿತ್ರ ಮಹಾನ್ ಕುಸ್ತಿ ಪಟು ಮಹಾವೀರ್ ಸಿಂಗ್ ಫೋಗಟ್ ಮತ್ತವರ ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿಯರ ನಿಜ ಜೀವನಾಧರಿತವಾಗಿದೆ. ಆದರೆ ಈ ಚಿತ್ರದಲ್ಲಿ ಫೋಗಟ್ ಸಹೋದರಿಯರ ಕೋಚ್ ಪಾತ್ರಧಾರಿಯನ್ನು ಚಿತ್ರದ ಖಳನಾಯಕನಂತೆ ಪ್ರಸ್ತುತಪಡಿಸಲಾಗಿದ್ದು ಚಿತ್ರದಲ್ಲಿ ಆತ ಮಹಾವೀರ್ ಫೋಗಟ್ ತನ್ನ ಪುತ್ರಿಯರು ಭಾಗವಹಿಸುತ್ತಿರುವ ಪ್ರಮುಖ ಪಂದ್ಯವೊಂದನ್ನು ನೋಡದಂತೆ ಅವರನ್ನುಮನೆಯೊಂದರಲ್ಲಿ ಬಂಧಿಯಾಗಿಸುವ ದೃಶ್ಯವೂ ಇದೆ.
ತನ್ನ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಚಿತ್ರದಲ್ಲಿ ತನ್ನ ಪಾತ್ರವನ್ನು ಬಿಂಬಿಸಿರುವ ಬಗ್ಗೆ 2010ರ ಕಾಮನ್ವೆಲ್ತ್ ಗೇಮ್ಸ್ ಗೆ ಸಹೋದರಿಯರನ್ನು ತಯಾರು ಮಾಡಿದ್ದ ಸೋಂಧಿ ಬಹಳಷ್ಟು ಅಸಂತುಷ್ಟರಾಗಿದ್ದಾರೆ.
‘‘ಚಿತ್ರದಲ್ಲಿ ಕೋಚ್ ಹೆಸರು ಪಿ.ಆರ್ ಕದಮ್ ಎಂದಿಡಲಾಗಿದ್ದರೂ ಅದು ನನ್ನ ಜೀವನಕ್ಕೆ ಎಲ್ಲಿಯೋ ತಾಳೆಯಾಗುತ್ತಿದೆ. ನನಗೆ ಮಹಾವೀರ್ ಅವರು ಹಲವು ವರ್ಷಗಳಿಂದ ಪರಿಚಯ. ನಾನು ಅವರ ಪುತ್ರ್ರಿಯರನ್ನು ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ತರಬೇತಿ ನೀಡಿದ್ದೆ. ಅವರು ಯಾವತ್ತು ಹಸ್ತಕ್ಷೇಪ ನಡೆಸಿಲ್ಲ. ಆದರೆ ಚಿತ್ರದಲ್ಲಿ ನಾನೊಬ್ಬ ಕಠಿಣ ಕೋಚ್ ಆಗಿದ್ದೆನೆಂಬ ರೀತಿಯಲ್ಲಿ ಬಿಂಬಿಸಿರುವುದೇಕೆ ಎಂದು ನನಗೆ ತಿಳಿದಿಲ್ಲ. ಅವರಿಗೆ ತರಬೇತಿ ನೀಡಿದ್ದ ಇತರ ನಾಲ್ಕು ಮಂದಿ ಕೋಚ್ ಗಳೂ ಇದ್ದರು. ಆದರೆ ಅವರನ್ನು ಚಿತ್ರದಲ್ಲಿ ತೋರಿಸಿಲ್ಲ’’ ಎಂದಿದ್ದಾರೆ ಸೋಂಧಿ.
‘‘ವಾಸ್ತವತೆಯನ್ನು ಚಿತ್ರದಲ್ಲಿ ತಿರುಚಿರುವುದು ನೋವು ತಂದಿದೆ. ಚಿತ್ರ ನೋಡಿದ ನಂತರ ನಾನು ಕುಸ್ತಿ ಫೆಡರೇಶನ್ ಹಾಗೂ ಆಮಿರ್ ಅವರನ್ನು ಕಂಡು ವಿವರಣೆ ಕೇಳಲಿದ್ದೇನೆ ಎಂದು ಸೋಂಧಿ ಹೇಳಿದ್ದಾರೆ.







