ಜಯಲಲಿತಾ ನಿಧನದ ನಿಗೂಢತೆಗೆ ಸ್ಪೋಟಕ ತಿರುವು !
ಜಯಲಲಿತಾ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ

ಚೆನ್ನೈ, ಡಿ.29: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ನಟರಾಜನ್ ಅವರನ್ನು ಗುರುವಾರ ನಡೆದ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಐಎಡಿಎಂಕೆ ಪಕ್ಷದ ನಾಯಕಿ ಎಂದು ಘೊಷಿಸುತ್ತಿದ್ದಂತೆಯೇ ಅತ್ತ ಮದ್ರಾಸ್ ಹೈಕೋರ್ಟ್ ಜಯಲಲಿತಾ ಅವರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದೆ.
‘‘ಜಯಲಲಿತಾ ಸಾವಿನ ಬಗ್ಗೆ ನನಗೆ ವೈಯಕ್ತಿಕವಾಗಿ ಸಂಶಯಗಳಿವೆ,’’ ಎಂದು ಎಐಎಡಿಎಂಕೆ ಸದಸ್ಯ ಜೋಸೆಫ್ ಎಂಬವರು ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭ ರಜಾಕಾಲದ ಪೀಠದನ್ಯಾಯಾಧೀಶ ಜಸ್ಟಿಸ್ ವೈದ್ಯನಾಥನ್ ಹೇಳಿದರು. ಜಯಲಲಿತಾ ಅವರು 75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಸಂದರ್ಭದ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು ‘‘ಆಕೆ ಆಹಾರ ಸೇವಿಸುತ್ತಿದ್ದಾರೆ, ಮಾತನಾಡುತ್ತಿದ್ದಾರೆ, ಸಭೆ ನಡೆಸುತ್ತಿದ್ದಾರೆ ಹಾಗೂ ಕಡತಗಳಿಗೆ ಸಹಿ ಹಾಕುತ್ತಿದ್ದಾರೆಂಬ ವರದಿಗಳು ಬಂದಿದ್ದವು. ಹಾಗಿರುವಾಗ ಆಕೆ ಒಮ್ಮೆಲೇ ಹೇಗೆ ಸತ್ತರು ? ಈಗ ಅವರು ಸಾವಿಗೀಡಾದ ನಂತರವಾದರೂ ಸತ್ಯ ಹೊರ ಬರಬೇಕು,’’ ಎಂದುಹೇಳಿದರು.
‘‘ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಅದರ ಪೋಸ್ಟ್ ಮಾರ್ಟಂ ಮಾಡಲು ನ್ಯಾಯಾಲಯ ಆದೇಶಿಸಲೂಬಹುದು’’ ಎಂದು ನ್ಯಾಯಾಧೀಶರು ಹೇಳಿದರು. ‘‘ಆಕೆಯ ಸಾವಿನ ನಂತರವೂ ವೈದ್ಯಕೀಯ ವರದಿಗಳನ್ನು ನೀವು ನೀಡಿಲ್ಲ. ನಾವೇಕೆ ಶವವನ್ನು ಹೊರತೆಗೆಯಲು ಆದೇಶಿಸಬಾರದು ?’’ ಎಂದು ಜಸ್ಟಿಸ್ ವೈದ್ಯನಾಥನ್ ತಮಿಳುನಾಡು ಸರಕಾರವನ್ನು ಪ್ರಶ್ನಿಸಿದರು. ಈ ರೀತಿಯಾಗಿ ತಮ್ಮ ‘ವೈಯಕ್ತಿಕ ಅಭಿಪ್ರಾಯ’ ನೀಡಿದ ನ್ಯಾಯಾಧೀಶರು ಪ್ರಕರಣವನ್ನು ಸಾಮಾನ್ಯ ಪೀಠಕ್ಕೆ ವಹಿಸಿದರು.
ಜಯಲಲಿತಾರ ‘‘ಸಂಶಯಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಿ ಸತ್ಯ ಹೊರಬರುವಂತೆ ಮಾಡಲು’’ ನ್ಯಾಯಾಂಗ ತನಿಖೆಗೆ ಕೇಂದ್ರ ಆದೇಶಿಸಬೇಕೆಂದು ಕೋರಿ ಪಿ.ಎ.ಜೋಸೆಫ್ ಎಂಬವರು ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದರು. ‘‘ಆರೋಗ್ಯವಂತರಾಗಿದ್ದ ರಾಜ್ಯದ ಅತ್ಯುನ್ನತ ಹುದ್ದೆ ಹೊಂದಿದಂತಹವರೊಬ್ಬರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎರಡು ತಿಂಗಳುಗಳ ಹಿಂದೆ ಹಗಲು ಹೊತ್ತಿನಲ್ಲಿ ಅನಾರೋಗ್ಯಕ್ಕೀಡಾಗಿ ರಾತ್ರಿ ಸಮಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.ಆಕೆ ಕೇವಲ ಜ್ವರದಿಂದ ಬಳಲುತ್ತಿದ್ದಾರೆ ಹಾಗೂ ಎರಡು ದಿನಗಳಲ್ಲಿ ಮನೆಗೆ ಹಿಂದಿರುಗುತ್ತಾರೆಂದು ವರದಿಗಳು ಹೇಳಿದ್ದವು.ಆದರೆ ಮುಂದೆ ನಡೆದ ಘಟನಾವಳಿಗಳು ಆಘಾತಕಾರಿಯಾಗಿದ್ದ ಕಾರಣ ಅರ್ಜಿದಾರರು ಈ ಮನವಿಯನ್ನು ದಾಖಲಿಸಲು ಕಾರಣವಾಗಿದೆ.’’
ಸೆಪ್ಟೆಂಬರ್ 22ರಂದು ಜ್ವರ ಮತ್ತು ಡಿಹೈಡ್ರೇಶನ್ ನಿಂದ ಬಳಲುತ್ತಿದ್ದ ಜಯಲಲಿತಾರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ ಆಕೆ ಡಿಸೆಂಬರ್ 5ರಂದು ಹೃದಯಸ್ಥಂಭನದಿಂದಾಗಿ ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು. ಅದಕ್ಕೂ ಮುಂಚಿನ ವೈದ್ಯಕೀಯ ಬುಲೆಟಿನ್ ಗಳ ಪ್ರಕಾರ ಮುಖ್ಯಮಂತ್ರಿಯ ಆರೋಗ್ಯ ಸ್ಥಿರವಾಗಿದೆ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಆಕೆಗೆವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಲಾಗಿತ್ತು. ತರುವಾಯ ಡಿಸೆಂಬರ್ 4ರಂದು ಆಕೆಗೆ ಹೃದಯ ಸ್ಥಂಭನ ಉಂಟಾಗಿದೆಯೆಂದು ತಿಳಿದು ಬರುತ್ತಲೇಇಂಗ್ಲೆಂಡಿನ ಖ್ಯಾತ ವೈದ್ಯ ಡಾ.ರಿಚರ್ಡ್ ಬೀಲೆ ಹಾಗೂ ಎಐಐಎಂಎಸ್ ನ ತಜ್ಞ ವೈದ್ಯರಿಗೆ ಕರೆ ಕಳುಹಿಸಲಾಗಿತ್ತು.
ಡಿಸೆಂಬರ್ 18ರಂದು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಸಂಸದೆ ಶಶಿಕಲಾ ಪುಷ್ಪ ಸುಪ್ರೀಂ ಕೋರ್ಟಿನ ಮೊರೆ ಹೋಗಿ ಜಯಲಲಿತಾ ಸಾವು ‘ಶಂಕಾಸ್ಪದ’ ಎಂದು ಹೇಳಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರು. ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾರಿಗೂ ಮಾಹಿತಿ ನೀಡಲಾಗಿರಲಿಲ್ಲ. ಆಕೆಯನ್ನು ಭೇಟಿಯಾಗಲೂ ಯಾರಿಗೂ ಅನುಮತಿಯಿರಲಿಲ್ಲ ಎಂದು ಹೇಳಿದ್ದರು. ತಮಿಳುನಾಡು ತೆಲುಗು ಯುವ ಶಕ್ತಿ ಕೂಡ ಇಂತಹುದೇ ಮನವಿಯನ್ನು ಸಲ್ಲಿಸಿತ್ತಲ್ಲದೆ ಆಕೆಯ ವೈದ್ಯಕೀಯ ವರದಿಗಳನ್ನು ತಜ್ಞರು ಪರಿಶೀಲಿಸಬೇಕೆಂದೂ ಆಗ್ರಹಿಸಿತ್ತು.







