ಡಿ.31: ಪ್ರಧಾನಿಯಿಂದ ಮಹತ್ವದ ಘೋಷಣೆ ?

ಹೊಸದಿಲ್ಲಿ, ಡಿ. 29 : ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಇಂಡಿಯಾ ಟುಡೇ ಚಾನೆಲ್ ನಲ್ಲಿ ಸಂದರ್ಶನ ನೀಡಲಿದ್ದಾರೆ. ನೋಟು ರದ್ದತಿಯ ಬಳಿಕ ನಡೆಯುತ್ತಿರುವ ಈ ಮಹತ್ವದ ಸಂದರ್ಶನ ಗುರುವಾರ ರಾತ್ರಿ 8ಕ್ಕೆ ಇಂಡಿಯಾ ಟುಡೇ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ನೋಟು ರದ್ದತಿ ಕುರಿತ ಮಹತ್ವದ ಮಾಹಿತಿಗಳನ್ನು ಪ್ರಧಾನಿ ಮೋದಿ ಈ ಸಂದರ್ಶನದಲ್ಲಿ ಬಹಿರಂಗಪಡಿಸಲಿದ್ದಾರೆ ಎಂದು ಇಂಡಿಯಾ ಟುಡೇ ಸಂದರ್ಶನ ಕುರಿತ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ನವೆಂಬರ್ 8 ರಂದು 500, 1000 ರೂ. ನೋಟುಗಳನ್ನು ರದ್ದು ಮಾಡಿದ ಬಳಿಕ ಉಂಟಾದ ಸಂಕಷ್ಟವನ್ನು ದೂರ ಮಾಡಲು ತನಗೆ 50 ದಿನಗಳ ಕಾಲಾವಕಾಶ ನೀಡುವಂತೆ ಪ್ರಧಾನಿ ಹೇಳಿದ್ದರು. ಈ ಅವಧಿ ಈಗ ಮುಕ್ತಾಯವಾಗಿರುವ ಹಾಗೂ ನೋಟು ರದ್ದತಿಯ ಸಮಸ್ಯೆಗಳು ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಪ್ರಧಾನಿ ಏನು ಹೇಳಲಿದ್ದಾರೆ ಎಂದು ಕುತೂಹಲ ಕೆರಳಿದೆ.
ಇಷ್ಟೇ ಅಲ್ಲ , ಡಿಸೆಂಬರ್ 31ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದು ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲ. ಇದು ಹೌದು ಎಂದಾದರೆ , ಈ ಭಾಷಣದಲ್ಲಿ ಯಾವುದಾದರೂ ಮಹತ್ವದ ಘೋಷಣೆ ಇರುವುದು ಬಹುತೇಕ ಖಚಿತ.
ಅದು ಏನು ಎಂಬುದು ಈಗ ಚರ್ಚೆಯಲ್ಲಿರುವ ವಿಷಯ. ಪ್ರತಿಯೊಬ್ಬರೂ ಈ ವಿಷಯದಲ್ಲಿ ಅವರವರ ರೀತಿಯಲ್ಲಿ ಊಹೆ ಮಾಡುತ್ತಿದ್ದಾರೆ.
ಜ.2 ಕ್ಕೆ ಬಿಜೆಪಿಯ ಮಹತ್ವದ ಸಭೆ ನಡೆಯಲಿದೆ ಎಂಬುದು ಇನ್ನೊಂದು ವದಂತಿ. ಈ ಸಭೆಯಲ್ಲಿಯೂ ಪ್ರಧಾನಿ ಅಥವಾ ಅಮಿತ್ ಶಾ ಮಹತ್ವದ ಪ್ರಕಟಣೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ , ಇದು ವದಂತಿ ಮಾತ್ರ.
ಪ್ರಧಾನಿಯ ಭಾಷಣ ಹಾಗು ಪಕ್ಷದ ಸಭೆ ಇರುವುದು ಹೌದು ಎಂದಾದರೆ, ಯಾವುದಾದರೂ ದೊಡ್ಡ ಪ್ರಕಟಣೆ ಇರುವುದು ಖಚಿತ ಎಂದು ರಾಜಕೀಯ ವಲಯಗಳು ಅಂದಾಜಿಸಿವೆ. ಅದು ಏನು ಎಂಬುದನ್ನು ಕಾಲವೇ ಹೇಳಬೇಕು.
PM @narendramodi reveals the inside story of #DeMonetisation!
— India Today (@IndiaToday) December 29, 2016
Watch the biggest year end interview on @IndiaToday TV, 8pm onwards pic.twitter.com/hw1xmqiVXB







