ಹರಿದ 1 ಸಾವಿರ ರೂ. ನೋಟನ್ನು ಸ್ವೀಕರಿಸಲು ನಿರಾಕರಿಸಿದ ಎಸ್‌ಬಿಐ ಸಿಬ್ಬಂದಿ

ಮಂಗಳೂರು, ಡಿ.29: ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹರಿದ 1 ಸಾವಿರ ರೂ. ನೋಟನ್ನು ಸ್ವೀಕರಿಸಲು ಸಿಬ್ಬಂದಿ ನಿರಾಕರಿಸಿದ ಘಟನೆ ಗುರುವಾರ ನಡೆದಿದೆ.
ಬಂದರ್ ಕಂದುಕ ನಿವಾಸಿ ಮುಹಮ್ಮದ್ ಮುಸ್ತಫಾ ಎಂಬವರು ಗುರುವಾರ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಚೇರಿಗೆ ತೆರಳಿ 1 ಸಾವಿರ ರೂ.ಯ 1 ಹರಿದ ಹಳೆಯ ನೋಟನ್ನು ಸಲ್ಲಿಸಲು ಹೋದಾಗ ಅಲ್ಲಿನ ಸಿಬ್ಬಂದಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲದೆ ಚಲನ್‌ನ ಸ್ಲಿಪ್‌ನಲ್ಲಿ ಈ ನೋಟನ್ನು ಸ್ವೀಕರಿಸಲು ಆಗುವುದಿಲ್ಲ ಎಂದು ಬರೆದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮುಹಮ್ಮದ್ ಮುಸ್ತಫಾ, ಹಳೆಯ ಹರಿದ 1 ಸಾವಿರ ರೂಪಾಯಿಯ ನೋಟನ್ನು ಬ್ಯಾಂಕ್‌ಗೆ ಸಲ್ಲಿಸಲು ಹೋಗಿ ಭದ್ರತಾ ಸಿಬ್ಬಂದಿಯ ಜೊತೆ ವಿಷಯ ತಿಳಿಸಿದೆ. ಅವರು ಸೂಚಿಸಿದ ಕೌಂಟರ್‌ಗೆ ತೆರಳಿದಾಗ ಅಲ್ಲಿನ ಸಿಬ್ಬಂದಿ, ಯಾರಲ್ಲಿ ಕೇಳಿ ಒಳಗೆ ಬಂದದ್ದು? ಇಲ್ಲಿಗೆ ಯಾಕೆ ಬಂದದ್ದು? ಎಂದು ಅಬ್ಬರಿಸತೊಡಗಿದರು. ಹಳೆಯ ಹರಿದ ನೋಟನ್ನು ಸಲ್ಲಿಸಲು ಬಂದಿದ್ದೇನೆ ಎಂದಾಗ ಈ ನೋಟು ಸಂಪೂರ್ಣ ಹರಿದಿದೆ. ನಾವು ಸ್ವಲ್ಪ ಹರಿದದ್ದನ್ನು ಮಾತ್ರ ಸ್ವೀಕರಿಸುವುದು. 2 ತುಂಡಾಗಿರುವ ಈ ನೋಟನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಿಬ್ಬಂದಿಯ ವರ್ತನೆ ಮತ್ತು ಹೇಳಿಕೆಯನ್ನು ನಾನು ಪ್ರಶ್ನಿಸಿದಾಗ ಭದ್ರತಾ ಸಿಬ್ಬಂದಿಯನ್ನು ಕರೆಸಿ ನಿನ್ನನ್ನು ಹೊರಗೆ ಅಟ್ಟುವೆ ಎಂದು ಅಬ್ಬರಿಸಿದರು. ಇದು ಸಾರ್ವಜನಿಕ ಉದ್ಯಮ ಕ್ಷೇತ್ರ. ನಾನೊಬ್ಬ ಗ್ರಾಹಕ. ಹೊರಗೆ ಅಟ್ಟುವುದು ಅಷ್ಟು ಸುಲಭವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿ ಹೊರಗೆ ಬಂದೆ ಎಂದು ತಿಳಿಸಿದ್ದಾರೆ.







