ಮಂಗಳೂರಿನಲ್ಲಿ ವಿಶ್ವ ಮಾನವ ದಿನಾಚರಣೆ

ಮಂಗಳೂರು, ಡಿ.29: ವ್ಯಕ್ತಿ ಹುಟ್ಟುವಾಗ ವಿಶ್ವಮಾನವನಾಗಿದ್ದು, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ. ಹೀಗಾಗಿ ಭಾಷೆ, ಪ್ರದೇಶ, ನಾಡು-ನುಡಿಗಳ ಮೇಲೆ ಅಭಿಮಾನವಿಟ್ಟು ಮತ್ತೆ ವಿಶ್ವಮಾನವರಾಗಬೇಕಾಗಿದೆ ಎಂದು ಕುವೆಂಪು ಪ್ರತಿಪಾದಿಸಿದ್ದರು. ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಸಂಪತ್‌ಕುಮಾರ್ ಹೇಳಿದರು.
ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ನಗರದ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ದ.ಕ.ಜಿಲ್ಲಾಡಳಿತ, ಜಿ.ಪಂ.ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಶೃತಿ ಜ್ಞಾನ, ಮತಿ ಜ್ಞಾನದ ಮೂಲಕ ಅನುಭೂತಿ ಜ್ಞಾನಕ್ಕೇರಬೇಕು ಎನ್ನುವುದು ಕುವೆಂಪು ಕಂಡುಕೊಂಡ ಸತ್ಯ. ಹೀಗಾಗಿಯೇ ಅವರು ಪಂಚ ತತ್ವ ಹಾಗೂ ಸಪ್ತ ಸೂತ್ರಗಳ ಮೂಲಕ ಬದುಕನ್ನು ರೂಪಿಸಲು ಸಲಹೆ ನೀಡುತ್ತಿದ್ದರು. ಜಾತಿ, ಮತಗಳನ್ನು ಮೀರಿ ಧರ್ಮಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಕುವೆಂಪು ಅವರ ವಾದವಾಗಿತ್ತು ಎಂದು ಡಾ. ಸಂಪತ್ ಕುಮಾರ್ ನುಡಿದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ‘ವಿಶ್ವ ಮಾನವ ಕುವೆಂಪು’ ಎಂಬ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿದರು.
ಶಾಸಕ ಮೊದಿನ್ ಬಾವಾ ಮಾತನಾಡಿದರು.
ವೇದಿಕೆಯಲ್ಲಿ ಮುಡಾ ಅಧ್ಯಕ್ಷ ಕೆ.ಸುರೇಶ್ ಬಳ್ಳಾಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ತಹಶೀಲ್ದಾರ್ ಸಿ.ಮಹದೇವಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಪ್ರಸನ್ನ, ವಾರ್ತಾಧಿಕಾರಿ ಖಾದರ್ ಷಾ, ಮುಖ್ಯಶಿಕ್ಷಕಿಯರಾದ ಶುಭಾ ಭಟ್, ಶೈಲಜಾ, ನಯನಾ ಶೆಣೈ ಉಪಸ್ಥಿತರಿದ್ದರು.
ಭಾವಗೀತೆ ಹಾಗೂ ಕುವೆಂಪು ಅವರ ಚಿತ್ರ ಬಿಡಿಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕೆ.ಬಿಂದು ಕುವೆಂಪು ಅವರ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು.
ಮಂಜುಳಾ ಶೆಟ್ಟಿ ನಿರ್ವಹಿಸಿದರು.







